ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ತತ್ತರಿಸಿದ್ದಾರೆ. ಹಾಲು, ಮೊಸರು ಬೆಲೆ ಏರಿಕೆಯ ನಂತರ ಇದೀಗ ಕೆಎಂಎಫ್ (KMF) ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಸಿಕ್ಕಿದೆ. ನಂದಿನಿ ಬ್ರ್ಯಾಂಡ್‌ನ ತುಪ್ಪದ ಬೆಲೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಲೆ ಏರಿಕೆ ಅಂದರೆ ಸಾಮಾನ್ಯವಾಗಿ ಜನರಿಗೆ ಕಷ್ಟವಾಗುತ್ತದೆ, ಆದರೆ ಈ ಬಾರಿ ತುಪ್ಪದ ದರ ಏರಿಕೆಯು ನಿಜಕ್ಕೂ ನುಂಗಲಾರದ ಬಿಸಿ ತುಪ್ಪವಾಗಿದೆ!
ಕೆಎಂಎಫ್‌ನ ನಂದಿನಿ ತುಪ್ಪ ಈಗ ದುಬಾರಿಯಾಗಿದೆ. ಮೊದಲು 610 ರೂ.ಗೆ ಮಾರಾಟವಾಗುತ್ತಿದ್ದ ಒಂದು ಲೀಟರ್ ತುಪ್ಪ ಈಗ ನೇರವಾಗಿ 700 ರೂ.ಗೆ ನಿಗದಿಯಾಗಿದೆ. ಅಂದರೆ, ಬರೋಬ್ಬರಿ 90 ರೂಪಾಯಿ ಏರಿಕೆಯಾಗಿದೆ. ಈ ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೆ ಜಿಎಸ್‌ಟಿ ಸ್ಲ್ಯಾಬ್ ಬದಲಾವಣೆಯ ಮೊದಲು ತುಪ್ಪದ ಬೆಲೆ 650 ರೂ. ಇತ್ತು. ಬಳಿಕ 40 ರೂ. ಇಳಿಕೆ ಮಾಡಲಾಗಿತ್ತು. ಆದರೆ ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ, ಕೆಎಂಎಫ್ ಮತ್ತೆ ದರ ಪರಿಷ್ಕರಣೆ ಮಾಡುವ ನಿರ್ಧಾರಕ್ಕೆ ಬಂದಿದೆ.
ಹೊರ ರಾಜ್ಯಗಳಿಂದಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ:
ಕೇವಲ ಕರ್ನಾಟಕದಲ್ಲೇ ಅಲ್ಲ, ಇತರ ರಾಜ್ಯಗಳಿಂದಲೂ ಕೆಎಂಎಫ್ ತುಪ್ಪಕ್ಕೆ ದೊಡ್ಡ ಮಟ್ಟದ ಬೇಡಿಕೆ ಇದೆ. ಇದರ ಪರಿಣಾಮವಾಗಿ ಕಂಪನಿಗೆ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಹಾಲು ಮತ್ತು ಮೊಸರು ಬೆಲೆ ಏರಿಕೆಯ ನಂತರ ಈಗ ತುಪ್ಪದ ದರ ಏರಿಕೆಯಿಂದ ಗ್ರಾಹಕರ ಜೇಬಿಗೆ ಮತ್ತೊಂದು ಹೊರೆ ಬಿದ್ದಿದೆ. ಕೆಎಂಎಫ್ ಅಧಿಕಾರಿಗಳ ಪ್ರಕಾರ, “ವಿಶ್ವಮಟ್ಟದಲ್ಲಿ ತುಪ್ಪದ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲೂ ಪರಿಷ್ಕೃತ ದರ ಅನಿವಾರ್ಯವಾಗಿತ್ತು,” ಎಂದು ತಿಳಿಸಿದ್ದಾರೆ.

