ಹೊಸದಿಗಂತ ಡಿಜಿಟಲ್ ಡೆಸ್ಕ್:
ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಮೆಗಾ ಹರಾಜು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಕಳೆದ ಸೀಸನ್‌ನಲ್ಲಿ ಮುಖ್ಯ ಕೋಚ್ ಆಗಿದ್ದ ಲ್ಯೂಕ್ ವಿಲಿಯಮ್ಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅವರ ಬದಲಿಗೆ ಮಲೋಲನ್ ರಂಗರಾಜನ್ ಅವರನ್ನು ಹೊಸ ಕೋಚ್ ಆಗಿ ನೇಮಕ ಮಾಡಲಾಗಿದೆ.
ಮಲೋಲನ್ ರಂಗರಾಜನ್, ಈ ಹಿಂದೆ ಆರ್‌ಸಿಬಿ ಫ್ರಾಂಚೈಸಿಯ ಸ್ಕೌಟಿಂಗ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ನೆವಿಸ್ ಪ್ಯಾಟ್ರಿಯಾಟ್ಸ್ ತಂಡದಲ್ಲಿ ಸಹಾಯಕ ಕೋಚ್ ಆಗಿ ಅನುಭವ ಪಡೆದಿದ್ದರು. ಇದೀಗ ಅವರು ಆರ್‌ಸಿಬಿ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಹೊಸ ಇನಿಂಗ್ಸ್ ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಮಲೋಲನ್ ಅವರೊಂದಿಗೆ ಇಂಗ್ಲೆಂಡ್‌ನ ಮಾಜಿ ವೇಗಿ ಅನ್ಯಾ ಶ್ರಬ್ಸೋಲ್ ಅವರನ್ನು ತಂಡದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಶ್ರಬ್ಸೋಲ್ ಅವರು ಇಂಗ್ಲೆಂಡ್ ತಂಡದ ಪರ ಹಲವು ಸ್ಮರಣೀಯ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ತಾಂತ್ರಿಕ ಜ್ಞಾನ ಹಾಗೂ ಅನುಭವ RCB ತಂಡಕ್ಕೆ ಬಲ ನೀಡುವ ನಿರೀಕ್ಷೆಯಿದೆ.
WPL ಹರಾಜು ನವೆಂಬರ್ 26ರಿಂದ 29ರವರೆಗೆ:
ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜು ನವೆಂಬರ್ 26ರಿಂದ 29ರ ನಡುವೆ ನಡೆಯಲಿದೆ. ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ retained ಪಟ್ಟಿ ಸಲ್ಲಿಸಬೇಕಿದೆ. ಪ್ರತಿ ತಂಡಕ್ಕೆ ಗರಿಷ್ಠ ಐವರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ.
ಹರಾಜಿನ ಪ್ರಕಾರ, ಮೊದಲ retained ಆಟಗಾರ್ತಿಗೆ ₹3.50 ಕೋಟಿ, ಎರಡನೇ ಆಟಗಾರ್ತಿಗೆ ₹2.50 ಕೋಟಿ, ಮೂರನೇ ಆಟಗಾರ್ತಿಗೆ ₹1.75 ಕೋಟಿ, ನಾಲ್ಕನೇ ಆಟಗಾರ್ತಿಗೆ ₹1 ಕೋಟಿ ಮತ್ತು ಐದನೇ ಆಟಗಾರ್ತಿಗೆ ₹50 ಲಕ್ಷ ನಿಗದಿ ಮಾಡಲಾಗಿದೆ. ಅಂದರೆ ಒಟ್ಟು ₹9.25 ಕೋಟಿಯ ಒಳಗೆ ಐವರನ್ನು ಉಳಿಸಿಕೊಳ್ಳಬಹುದು.

