ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕಾದ ರಾಜಕೀಯದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣ ದಾಖಲಾಗಿದೆ. ಭಾರತೀಯ ಮೂಲದ ಹಾಗೂ ಡೆಮಾಕ್ರಟಿಕ್ ಪಕ್ಷದ ನಾಯಕಿ ಘಜಾಲಾ ಹಶ್ಮಿ ಅವರು ವರ್ಜೀನಿಯಾದ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ರೀಡ್ ಅವರನ್ನು ಸೋಲಿಸಿ ಈ ಮಹತ್ವದ ಗೆಲುವು ಸಾಧಿಸಿದ್ದಾರೆ.
1964ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಘಜಾಲಾ ಹಶ್ಮಿ, ನಾಲ್ಕನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಅಮೆರಿಕಾಕ್ಕೆ ವಲಸೆ ಹೋದವರು. ಅಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು, ನಂತರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಈ ಹಿಂದೆ ಅವರು ವರ್ಜೀನಿಯಾ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ಮೊದಲ ದಕ್ಷಿಣ ಏಷ್ಯಾದ ಮೂಲದ ಅಮೆರಿಕನ್ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದರು.
ಘಜಾಲಾ ಹಶ್ಮಿ ಅವರು 2019ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ಮೊದಲ ಚುನಾವಣೆಯಲ್ಲೇ ರಿಪಬ್ಲಿಕನ್ ಪಕ್ಷದ ಬಲವಾದ ಪ್ರದೇಶದಿಂದ ಗೆಲುವು ಸಾಧಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ನಂತರ ಅವರು ವರ್ಜೀನಿಯಾ ಸೆನೆಟ್‌ನ ಶಿಕ್ಷಣ ಮತ್ತು ಆರೋಗ್ಯ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಸಾರ್ವಜನಿಕ ಶಿಕ್ಷಣ, ಮಹಿಳಾ ಹಕ್ಕುಗಳು ಹಾಗೂ ಆರೋಗ್ಯ ಸೇವೆಗಳ ಸುಧಾರಣೆಗೆ ಅವರ ಪಾತ್ರ ಶ್ಲಾಘನೀಯವಾಗಿದೆ.
ಇತ್ತೀಚೆಗಷ್ಟೇ ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಜೋಹ್ರಾನ್ ಮಾಮ್ದಾನಿ ಆಯ್ಕೆಯಾದ ಬಳಿಕ, ಈಗ ಘಜಾಲಾ ಹಶ್ಮಿ ಅವರ ಗೆಲುವು ಅಮೆರಿಕಾದ ರಾಜಕೀಯದಲ್ಲಿ ಭಾರತೀಯ ಮೂಲದ ನಾಯಕತ್ವದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ಪಷ್ಟಪಡಿಸಿದೆ.

