ರಾತ್ರಿ ಹೊತ್ತಿಗೆ ತೋಟದಲ್ಲಿ, ಹೊಲಗಳಲ್ಲಿ ಅಥವಾ ಕಾಡಿನ ಅಂಚಿನಲ್ಲಿ ಮಿಂಚುಹುಳುಗಳು (Fireflies) ಹಾರಾಡುತ್ತಾ ಬೆಳಕಿನ ಉಂಡೆಗಳಂತೆ ಮಿನುಗುತ್ತಿರುವ ದೃಶ್ಯ ಯಾರನ್ನಾದರೂ ಆಕರ್ಷಿಸದೇ ಇರದು. ಮಕ್ಕಳಿಗೆ ಇದು ಮಾಯೆಯಂತೆ ಕಾಣಿಸಿದರೂ, ವಾಸ್ತವದಲ್ಲಿ ಇದು ಪ್ರಕೃತಿಯ ಅತ್ಯಂತ ಸುಂದರವಾದ ವೈಜ್ಞಾನಿಕ ಪ್ರಕ್ರಿಯೆಗಳಲ್ಲಿ ಒಂದು. ಮಿಂಚುಹುಳುಗಳು ಹೇಗೆ ಬೆಳಕು ನೀಡುತ್ತವೆ? ಏಕೆ ರಾತ್ರಿ ಹೊತ್ತಿಗೇ ಮಾತ್ರ ಹೊಳೆಯುತ್ತವೆ? ಈ ಪ್ರಶ್ನೆಗಳಿಗೆ ಇಲ್ಲಿದೆ ಸ್ಪಷ್ಟ ಉತ್ತರ.
- ಲೂಸಿಫೆರಿನ್‌ನ ಕಮಾಲ್ : ಮಿಂಚುಹುಳುಗಳು ದೇಹದಲ್ಲಿ ಲೂಸಿಫೆರಿನ್ (Luciferin) ಎಂಬ ವಿಶೇಷ ರಾಸಾಯನಿಕ ದ್ರವ್ಯವಿರುತ್ತದೆ. ಇದು ಆಮ್ಲಜನಕ ಮತ್ತು ಲೂಸಿಫೆರೇಸ್ (Luciferase) ಎಂಬ ಎಂಜೈಮ್‌ಗಳ ಸಹಾಯದಿಂದ ಪ್ರತಿಕ್ರಿಯೆಗೊಂಡಾಗ ಬೆಳಕನ್ನು ಉಂಟುಮಾಡುತ್ತದೆ. ಈ ಬೆಳಕನ್ನು “ಬಯೋಲ್ಯುಮಿನೆಸೆನ್ಸ್” (Bioluminescence) ಎಂದು ಕರೆಯುತ್ತಾರೆ.
- ಈ ಬೆಳಕು ಉಷ್ಣವಿಲ್ಲದ ಶುದ್ಧ ಶಕ್ತಿ: ಮಿಂಚುಹುಳುವಿನ ಬೆಳಕು ‘ಕೋಲ್ಡ್ ಲೈಟ್’ (Cold Light) ಆಗಿದ್ದು, ಅದು ಯಾವುದೇ ಉಷ್ಣವನ್ನು ಉತ್ಪಾದಿಸುವುದಿಲ್ಲ. ಹೀಗಾಗಿ ಹುಳುವಿನ ದೇಹ ಬಿಸಿ ಆಗದೇ ಸಹ ನಿರಂತರವಾಗಿ ಬೆಳಕನ್ನು ತೋರಿಸುತ್ತದೆ. ಇದು ಪ್ರಕೃತಿಯ ಅತ್ಯಂತ ಶುದ್ಧ ಶಕ್ತಿಯ ರೂಪಗಳಲ್ಲಿ ಒಂದಾಗಿದೆ.
- ಬೆಳಕಿನ ಉದ್ದೇಶ – ಸಂಗಾತಿ ಹುಡುಕುವ ಗುಟ್ಟು: ರಾತ್ರಿ ವೇಳೆ ಮಿಂಚುಹುಳುಗಳು ಹೊಳೆಯುವುದರ ಪ್ರಮುಖ ಕಾರಣ ಸಂಗಾತಿಯನ್ನು ಆಕರ್ಷಿಸುವುದು. ಪ್ರತಿ ಪ್ರಜಾತಿಯ ಮಿಂಚುಹುಳುವಿಗು ವಿಭಿನ್ನ ಬೆಳಕಿನ ಮಿನುಗು ಮಾದರಿಯಿದೆ. ಆ ಬೆಳಕಿನ ಮೂಲಕ ಗಂಡು ಹಾಗೂ ಹೆಣ್ಣು ಹುಳುಗಳು ಪರಸ್ಪರ ಗುರುತಿಸಿಕೊಳ್ಳುತ್ತವೆ.
- ಬೆಳಕು ರಕ್ಷಣೆಯ ಸೂಚನೆ ಕೂಡ ಹೌದು: ಮಿಂಚುಹುಳುವಿನ ಬೆಳಕು ಶತ್ರುಗಳಿಗೆ ಎಚ್ಚರಿಕೆಯ ಸಂದೇಶವಾಗಿಯೂ ಕಾರ್ಯನಿರ್ವಹಿಸುತ್ತದೆ. ಅನೇಕ ಪ್ರಾಣಿಗಳು ಈ ಬೆಳಕನ್ನು ಕಂಡು, “ಇದು ವಿಷಕಾರಿ” ಎಂದು ತಪ್ಪಿಸಿಕೊಂಡು ಹೋಗುತ್ತವೆ. ಹೀಗಾಗಿ ಬೆಳಕು ಬದುಕುಳಿಯುವ ತಂತ್ರವಾಗಿಯೂ ಸಹಾಯಕ.
ರಾತ್ರಿ ಮಾತ್ರ ಯಾಕೆ ಹೊಳೆಯುತ್ತವೆ?
ಹಗಲು ಬೆಳಕಿನ ನಡುವೆ ಮಿಂಚುಹುಳಿನ ಮಿನುಗು ಕಾಣಿಸದಿರುತ್ತದೆ. ಹೀಗಾಗಿ ಅವು ಸಂಜೆ ಅಥವಾ ರಾತ್ರಿ ಸಮಯದಲ್ಲೇ ಹಾರಾಡಿ ಬೆಳಕು ಬಿಡುತ್ತವೆ. ಈ ಸಮಯದಲ್ಲಿ ವಾತಾವರಣ ತಂಪಾಗಿರುತ್ತದೆ ಮತ್ತು ಪ್ರಾಣಿಗಳ ಚಲನವಲನ ಕಡಿಮೆಯಾಗಿರುವುದರಿಂದ ಸಂವಹನ ಸುಲಭವಾಗುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

