ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ನಾಳೆ (ನವೆಂಬರ್ 6) ಗೋಲ್ಡ್ ಕೋಸ್ಟ್‌ನ ಬಿಲ್ ಪಿಪ್ಪನ್ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಉಭಯ ತಂಡಗಳಿಗೂ ಅತ್ಯಂತ ನಿರ್ಣಾಯಕವಾಗಿದ್ದು, ಸರಣಿಯ ಗತಿ ನಾಳೆಯ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆ, ಇತ್ತೀಚಿನ ಮ್ಯಾಚ್‌ಗಳಲ್ಲಿ ಎರಡೂ ತಂಡಗಳು ತಲಾ ಒಂದು ಗೆಲುವು ಸಾಧಿಸಿವೆ. ಹೀಗಾಗಿ ಸರಣಿ ಪ್ರಸ್ತುತ 1-1 ಅಂತರದಿಂದ ಸಮಬಲದಲ್ಲಿದೆ. ನಾಳಿನ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಸೋಲನ್ನು ತಪ್ಪಿಸಿಕೊಳ್ಳುವಷ್ಟೇ ಅಲ್ಲದೆ, ಅಂತಿಮ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಟ್ರೋಫಿ ಕಬಳಿಸುವ ಸಾಧ್ಯತೆ ಹೆಚ್ಚಿಸಿಕೊಳ್ಳಲಿದೆ.
ಕಳೆದ ಹೋಬಾರ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್‌ಗಳ ಅಂತರದಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿದೆ. ಆ ಮ್ಯಾಚ್‌ನಲ್ಲಿ ಪ್ರದರ್ಶನ ತೃಪ್ತಿಕರವಾಗಿದ್ದರಿಂದ, ಕೋಚ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಇದೇ ಬಳಗವನ್ನು ಮುಂದುವರಿಸುವ ಸಾಧ್ಯತೆ ಇದೆ.
ಸಂಜು ಸ್ಯಾಮ್ಸನ್ ಮತ್ತು ಹರ್ಷಿತ್ ರಾಣಾ ಕಳೆದ ಪಂದ್ಯದಿಂದ ಹೊರಗಿಡಲ್ಪಟ್ಟಿದ್ದರು. ಇವರ ಬದಲಿಗೆ ಜಿತೇಶ್ ಶರ್ಮಾ ಮತ್ತು ಅರ್ಷದೀಪ್ ಸಿಂಗ್ ಕಣಕ್ಕಿಳಿದಿದ್ದರು. ಇಬ್ಬರೂ ಉತ್ತಮ ಪ್ರದರ್ಶನ ನೀಡಿರುವುದರಿಂದ ಗೋಲ್ಡ್ ಕೋಸ್ಟ್‌ನಲ್ಲೂ ಇವರನ್ನೇ ಮುಂದುವರೆಸುವ ನಿರೀಕ್ಷೆ ಇದೆ.
ಹೀಗಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ನೊಂದಿಗೆ ಮೈದಾನಕ್ಕಿಳಿಯಲು ಸಜ್ಜಾಗಿದೆ. ಆಸ್ಟ್ರೇಲಿಯಾ ಎದುರು ನಿರ್ಣಾಯಕ ಪಂದ್ಯದಲ್ಲಿ ಭಾರತದ ಗುರಿ ಸರಣಿಯಲ್ಲಿ ಮುನ್ನಡೆ ಪಡೆಯುವುದಾಗಿದೆ.
ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ ಮತ್ತು ವಾಷಿಂಗ್ಟನ್ ಸುಂದರ್.
ನಾಳಿನ ಗೋಲ್ಡ್ ಕೋಸ್ಟ್ ಹೋರಾಟದಲ್ಲಿ ಯಾರು ಮುನ್ನಡೆ ಸಾಧಿಸುತ್ತಾರೋ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರವಾಗಿದೆ.

