Wednesday, November 5, 2025

ಬಿಲಾಸ್ಪುರ ರೈಲು ಅಪಘಾತಕ್ಕೆ ಕಾರಣವೇನು? ಈ ಕುರಿತು ಅಧಿಕಾರಿಗಳು ಏನು ಹೇಳಿದ್ರು ನೋಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್​ಗಢದ ಬಿಲಾಸ್ಪುರದ ಬಳಿ ನಡೆದ ದುರಂತ ರೈಲು ಅಪಘಾತದಲ್ಲಿ11 ಜನ ಸಾವನ್ನಪ್ಪಿದ್ದಾರೆ ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದೀಗ ರೆಡ್ ಸಿಗ್ನಲ್ ಅನ್ನು ಮೀರಿದ ನಂತರ ಪ್ಯಾಸೆಂಜರ್ ರೈಲು 60 ರಿಂದ 70 ಕಿ.ಮೀ ವೇಗದಲ್ಲಿ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ’ ಎಂದು ರೈಲ್ವೆ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಗಾಯಗೊಂಡ ಪ್ರಯಾಣಿಕರನ್ನು ಬಿಲಾಸ್ಪುರದ ಅಪೋಲೋ ಆಸ್ಪತ್ರೆ ಮತ್ತು ಛತ್ತೀಸ್‌ಗಢ ವೈದ್ಯಕೀಯ ವಿಜ್ಞಾನ ಸಂಸ್ಥೆ (CIMS)ಗೆ ಸ್ಥಳಾಂತರಿಸಲಾಗಿದೆ.

ಮಂಗಳವಾರ ಛತ್ತೀಸ್‌ಗಢದ ಬಿಲಾಸ್ಪುರ ನಿಲ್ದಾಣದ ಬಳಿ ಮುಖ್ಯ ವಿದ್ಯುತ್ ಮಲ್ಟಿಪಲ್ ಯೂನಿಟ್ (MEMU) ಸ್ಥಳೀಯ ರೈಲು ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದು ಈ ರೈಲು ಅಪಘಾತ ಸಂಭವಿಸಿದೆ.

ಈ ಅಪಘಾತಕ್ಕೆ ಕಾರಣವೇನೆಂದರೆ, ಅಪಾಯದ ಸಿಗ್ನಲ್‌ನಲ್ಲಿ ರೈಲನ್ನು ನಿಯಂತ್ರಿಸಲು ರೈಲು ಸಿಬ್ಬಂದಿ ವಿಫಲರಾಗಿದ್ದಾರೆ. ಇದರಿಂದ ರೈಲು ಕೆಂಪು ಸಿಗ್ನಲ್ ಅನ್ನು ದಾಟಿದೆ. ರೈಲುಗಳ ನಡುವೆ ಡಿಕ್ಕಿಯಾದ ನಂತರ ಮೋಟಾರ್ ಕೋಚ್ ಒಳಗೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಗಾಯಗೊಂಡಿರುವುದು ಕಂಡುಬಂದಿದೆ.

ಗೂಡ್ಸ್ ರೈಲು ಕಾಣಿಸುವಷ್ಟು ದೂರದಲ್ಲಿದ್ದರೂ ಲೋಕೋ ಪೈಲಟ್ ಕೆಂಪು ಸಿಗ್ನಲ್ ಅನ್ನು ದಾಟಿದ್ದೇಕೆ? ಆತ ತುರ್ತು ಬ್ರೇಕ್ ಅನ್ನು ಏಕೆ ಹಾಕಲಿಲ್ಲ? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಯಾಣಿಕ ರೈಲಿನ ಲೊಕೊ ಪೈಲಟ್ ವಿದ್ಯಾ ಸಾಗರ್ ಈ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬರು. ಸಹಾಯಕ ಲೋಕೋ ಪೈಲಟ್ ಆದ ರಶ್ಮಿ ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಗಳಿಗೆ ಭಾರತೀಯ ರೈಲ್ವೆಯಿಂದ 10 ಲಕ್ಷ ರೂ.ಗಳವರೆಗೆ ಪರಿಹಾರ ಘೋಷಿಸಲಾಗಿದೆ. ಅಪಘಾತಕ್ಕೆ ನಿಖರವಾದ ಕಾರಣವನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಲು ರೈಲ್ವೆ ಸುರಕ್ಷತಾ ಆಯುಕ್ತರಿಂದ ವಿವರವಾದ ತನಿಖೆಗೆ ಆದೇಶಿಸಲಾಗಿದೆ.

error: Content is protected !!