Wednesday, November 5, 2025

SIR ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಅನುಷ್ಠಾನದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.

ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆನ್‌ಲೈನ್‌ ಮೂಲಕ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷವನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳು ಸರ್ಕಾರದ ಈ ಕ್ರಮವನ್ನು ಬೆಂಬಲಿಸಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವುದರಿಂದ, SIR ಅನ್ನು ಹೇಗೆ ಪ್ರಶ್ನಿಸಬೇಕು ಎಂಬುದರ ಕುರಿತು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಕಾನೂನು ಸಲಹೆ ಪಡೆಯುತ್ತವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನವೀಕರಿಸಿದ ಪಟ್ಟಿ ಈಗಾಗಲೇ ಜಾರಿಯಲ್ಲಿರುವಾಗ, 2002 ರ ಪಟ್ಟಿಗಳನ್ನು ಆಧರಿಸಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವುದು ‘ಅವೈಜ್ಞಾನಿಕ’ ಮತ್ತು ‘ದುರುದ್ದೇಶಪೂರಿತ ಉದ್ದೇಶ’ವನ್ನು ಹೊಂದಿದೆ ಎಂದು ಕೇರಳ ಸಿಎಂ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಎತ್ತಿದ ಕಳವಳಗಳನ್ನು ಸಂಪೂರ್ಣವಾಗಿ ಒಪ್ಪುತ್ತೇವೆ ಮತ್ತು ಎಸ್ಐಆರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದರೆ ಬೆಂಬಲಿಸಲು ಸಿದ್ಧರಿದ್ದೇವೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಅವರು ಹೇಳಿದ್ದಾರೆ.

error: Content is protected !!