January15, 2026
Thursday, January 15, 2026
spot_img

ಬುದ್ಧಿವಾದ ಹೇಳಿದ್ದಕ್ಕೆ ಸೇಡು: ತಾಯಿ-ಪತ್ನಿ ಹತ್ಯೆ ಮಾಡಿ ನಾಟಕವಾಡಿದ ಪಾತಕಿಗೆ ‘ಕಠಿಣ’ ಶಿಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ತಿ ವಿವಾದ, ಕುಡಿತ ಮತ್ತು ಜೂಜಾಟದ ಚಟದ ಕುರಿತು ಬುದ್ಧಿವಾದ ಹೇಳಿದ್ದ ತಾಯಿ ಮತ್ತು ಪತ್ನಿಯನ್ನೇ ರೈಲಿನಿಂದ ಹೊರತಳ್ಳಿ ಕೊಲೆ ಮಾಡಿದ ಆರೋಪಿಗೆ ವಿಜಯಪುರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಂಗಳವಾರ ಕಠಿಣ ಶಿಕ್ಷೆಯನ್ನು ವಿಧಿಸಿದೆ.

ಆರೋಪಿ ಚನ್ನಮಲ್ಲಪ್ಪ ಎಂಬಾತನಿಗೆ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ಹಾಗೂ ಹೆಚ್ಚುವರಿಯಾಗಿ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಘಟನೆ ವಿವರ:

ಮೃತರಾದ ನಾಗಮ್ಮ (ತಾಯಿ) ಮತ್ತು ಕವಿತಾ (ಪತ್ನಿ) ಅವರು ಚನ್ನಮಲ್ಲಪ್ಪನ ಆಸ್ತಿ ದುರ್ಬಳಕೆ, ಅತಿಯಾದ ಕುಡಿತ ಹಾಗೂ ಜೂಜಾಟದ ಚಟದ ಬಗ್ಗೆ ನಿರಂತರವಾಗಿ ತಿಳಿ ಹೇಳುತ್ತಿದ್ದರು. ಇದನ್ನೇ ದ್ವೇಷವಾಗಿರಿಸಿಕೊಂಡಿದ್ದ ಆರೋಪಿ, ಒಂದು ದಿನ ಗದಗದಿಂದ ವಿಜಯಪುರಕ್ಕೆ ಹೋಗುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮೊದಲು ತನ್ನ ಪತ್ನಿ ಕವಿತಾಳನ್ನು ರೈಲಿನಿಂದ ಹೊರತಳ್ಳಿ ಕೊಲೆ ಮಾಡಿದ್ದ.

ಇದನ್ನು ನೋಡಿ ತಾಯಿ ನಾಗಮ್ಮ ಕಿರುಚಾಡಿದಾಗ, ವಿಷಯ ಎಲ್ಲರಿಗೂ ತಿಳಿಯುವ ಭೀತಿಯಿಂದ ಆಕೆಯನ್ನೂ ಸಹ ರೈಲಿನಿಂದ ತಳ್ಳಿ ಹತ್ಯೆ ಮಾಡಿದ್ದ. ಅಷ್ಟೇ ಅಲ್ಲದೆ, ಯಾರಿಗೂ ಅನುಮಾನ ಬಾರದಂತೆ ತಕ್ಷಣವೇ ರೈಲಿನ ಸರಪಳಿ ಎಳೆದು, ಅವರ ದೇಹ ಬಿದ್ದ ಸ್ಥಳಕ್ಕೆ ಹೋಗಿ ಕಣ್ಣೀರು ಹಾಕುವ ನಾಟಕವಾಡಿದ್ದ.

ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಚನ್ನಮಲ್ಲಪ್ಪ ತನ್ನ ಎಲ್ಲ ಕೃತ್ಯಗಳನ್ನು ಒಪ್ಪಿಕೊಂಡಿದ್ದ. ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಮಹಾಂತೇಶ ಹೊಳಿ ಅವರು ನ್ಯಾಯಾಲಯಕ್ಕೆ ಬಲವಾದ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ದೀರ್ಘ ವಿಚಾರಣೆಯ ನಂತರ, ಮಂಗಳವಾರ ನ್ಯಾಯಾಲಯವು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದೆ.

Must Read

error: Content is protected !!