ಹೊಸದಿಗಂತ ಡಿಜಿಟಲ್ ಡೆಸ್ಕ್:
74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯ ಆರಂಭಕ್ಕೂ ಮುನ್ನವೇ ಭಾರೀ ವಿವಾದ ಸೃಷ್ಟಿಯಾಗಿದೆ. ಥೈಲ್ಯಾಂಡ್‌ನಲ್ಲಿ ನಡೆದ ಸಾಶಿಂಗ್ ಸೆರೆಮನಿ ವೇಳೆ, ಆಯೋಜಕರಾದ ಮಿಸ್ ಯೂನಿವರ್ಸ್ ಥೈಲ್ಯಾಂಡ್ (MUT) ನಿರ್ದೇಶಕ ನವಾತ್ ಇತ್ಸರಾಗ್ರಿಸಿಲ್ ಹಾಗೂ ಸ್ಪರ್ಧಿಗಳ ನಡುವೆ ತೀವ್ರ ಮಾತಿನ ಚಕಮಕಿ ಸಂಭವಿಸಿದ್ದು, ಹಲವಾರು ಸ್ಪರ್ಧಿಗಳು ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ.
ಸಾಶಿಂಗ್ ಸೆರೆಮನಿ ವೇಳೆ ನವಾತ್ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸದ ಕೆಲವು ಸ್ಪರ್ಧಿಗಳನ್ನು ಟೀಕಿಸಿದರು. ಯಾರೂ ಕೈ ಎತ್ತದಾಗ ಅವರು ಮೆಕ್ಸಿಕೋ ಪ್ರತಿನಿಧಿ ಫಾತಿಮಾ ಬಾಶ್ ಅವರ ಹೆಸರನ್ನು ಉಲ್ಲೇಖಿಸಿ, ಅವರ ರಾಷ್ಟ್ರೀಯ ನಿರ್ದೇಶಕರು ಥೈಲ್ಯಾಂಡ್ ಕುರಿತು ಯಾವುದೇ ಪೋಸ್ಟ್ ಮಾಡಬಾರದೆಂದು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು. ಫಾತಿಮಾ, ತಾವು ಆಯೋಜಕರ ಸೂಚನೆ ಪಾಲಿಸಲು ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಂತೆಯೇ, ನವಾತ್ ಅವರು ಮೆಕ್ಸಿಕೋ ತಂಡದ ನಿರ್ದೇಶಕರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಘೋಷಿಸಿದರು. ನಂತರ, “ನೀವು ನಿಮ್ಮ ನಿರ್ದೇಶಕರ ಮಾತು ಕೇಳುತ್ತಿದ್ದರೆ, ನೀವು ಮೂರ್ಖರು” ಎಂದು ಹೇಳಿ, ಫಾತಿಮಾ ಅವರನ್ನು ನೇರವಾಗಿ ಅವಮಾನಿಸಿದರು.
ನವಾತ್ ಅವರ ಹೇಳಿಕೆ ಬಳಿಕ, ಫಾತಿಮಾ “ನನಗೂ ಧ್ವನಿ ಇದೆ, ನಾನು ನನ್ನ ದೇಶವನ್ನು ಗೌರವದಿಂದ ಪ್ರತಿನಿಧಿಸುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಆದರೆ ನವಾತ್ ಭದ್ರತಾ ಸಿಬ್ಬಂದಿಯನ್ನು ಕರೆದು ಆಕೆಯನ್ನು ಸಭೆಯಿಂದ ಹೊರ ಹಾಕುವಂತೆ ಆದೇಶಿಸಿದರು. ಈ ಕ್ರಮದಿಂದ ಸಭೆಯಲ್ಲಿ ಇದ್ದ ಅನೇಕ ಸ್ಪರ್ಧಿಗಳು ಕೆರಳಿದ್ದು, ಹಾಲಿ ಮಿಸ್ ಯೂನಿವರ್ಸ್ ವಿಕ್ಟೋರಿಯಾ ಕಜಾರ್ ಥೇಲ್ವಿಗ್ ಕೂಡ ಸಭೆಯಿಂದ ಹೊರ ನಡೆದರು.
ಈ ಘಟನೆ ಬಳಿಕ, ಮಿಸ್ ಯೂನಿವರ್ಸ್ ಸ್ಪರ್ಧೆಯ ಆಯೋಜನೆ ಮತ್ತು MUT ನಿರ್ದೇಶಕರ ವರ್ತನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕೆಲವು ಸ್ಪರ್ಧಿಗಳು ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆಗಳೂ ವ್ಯಕ್ತವಾಗಿವೆ.

