ನಮ್ಮ ಸಂಪ್ರದಾಯದಲ್ಲಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಹಾಕುವುದು ಭಕ್ತಿಯ ಅತ್ಯಂತ ಉನ್ನತ ರೂಪವೆಂದು ಪರಿಗಣಿಸಲಾಗಿದೆ. ದೇವಾಲಯದಲ್ಲಾಗಲಿ, ಮನೆಯಲ್ಲಿ ಪೂಜೆಯಾಗಲಿ ಅಥವಾ ಹಬ್ಬದ ಸಂದರ್ಭದಲ್ಲಾಗಲಿ, ಸಾಷ್ಟಾಂಗ ನಮಸ್ಕಾರ ಹಾಕುವುದು ದೇವರ ಮುಂದೆ ಸಂಪೂರ್ಣ ಶರಣಾಗತಿ ಮತ್ತು ವಿನಯತೆಯ ಸಂಕೇತ. ಆದರೆ ಈ ಕ್ರಮದ ಹಿಂದಿನ ಅರ್ಥ ಕೇವಲ ಧಾರ್ಮಿಕವಲ್ಲ; ಅದರಲ್ಲಿ ಅಡಗಿರುವ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಅಂಶಗಳೂ ಅಷ್ಟೇ ಮಹತ್ವದವು.
ಶರಣಾಗತಿಯ ಸಂಕೇತ: ಸಾಷ್ಟಾಂಗ ನಮಸ್ಕಾರ ಅಂದರೆ ದೇಹದ ಎಂಟು ಭಾಗಗಳನ್ನೂ ನೆಲಕ್ಕೆ ತಾಗಿ ದೇವರಿಗೆ ಶರಣಾಗುವ ಕ್ರಿಯೆ. ತಲೆಯಿಂದ ಪಾದದವರೆಗೂ ನೆಲಕ್ಕೆ ಸ್ಪರ್ಶಿಸುವುದು ದೇವರ ಮುಂದೆ ಅಹಂಕಾರ ತೊರೆದು ಸಂಪೂರ್ಣ ವಿನಯವನ್ನು ತೋರಿಸುವ ಸಂಕೇತವಾಗಿದೆ. ಇದು “ನಾನು ಶೂನ್ಯ, ದೇವನೇ ಪರಿಪೂರ್ಣ” ಎಂಬ ಭಾವನೆಗೆ ದಾರಿಯಾಗಿದೆ.
ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ: ನಮಸ್ಕಾರ ಮಾಡುವಾಗ ದೇಹದ ಎಲ್ಲಾ ಸ್ನಾಯುಗಳು ಚಲನೆಗೊಳಗಾಗುತ್ತವೆ. ಇದು ಯೋಗಾಸನದಂತೆಯೇ ದೇಹಕ್ಕೆ ವ್ಯಾಯಾಮದ ಪ್ರಯೋಜನ ನೀಡುತ್ತದೆ. ರಕ್ತ ಸಂಚಲನ ಸರಿಯಾಗಿ ನಡೆಯುವುದರಿಂದ ಮನಸ್ಸು ಶಾಂತವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ.
ಶಕ್ತಿಯ ಸಂಚಲನ: ದೇವರ ಮುಂದೆ ನಮಸ್ಕಾರ ಮಾಡುವಾಗ ದೇಹದ ಪಾದಗಳು, ಕೈಗಳು ಮತ್ತು ನೆತ್ತಿ ನೆಲಕ್ಕೆ ತಾಗುತ್ತವೆ. ಭೂಮಿಯ ಐಯಾನ್ಸ್ ದೇಹದೊಳಗೆ ಪ್ರವೇಶಿಸಿ ಮಾನಸಿಕ ಶಾಂತಿ, ದೈಹಿಕ ಶಕ್ತಿ ಹೆಚ್ಚಿಸುತ್ತವೆ ಎಂದು ವೈಜ್ಞಾನಿಕರು ಹೇಳಿದ್ದಾರೆ.
ಭಕ್ತಿ ಮತ್ತು ಕೃತಜ್ಞತೆಯ ಅಭಿವ್ಯಕ್ತಿ: ಸಾಷ್ಟಾಂಗ ನಮಸ್ಕಾರ ದೇವರ ಆಶೀರ್ವಾದಕ್ಕಾಗಿ ಕೃತಜ್ಞತೆ ತೋರಿಸುವ ಒಂದು ವಿಧಾನವಾಗಿದೆ. ನಮ್ಮ ಜೀವನದಲ್ಲಿನ ಒಳ್ಳೆಯ ಸಂಗತಿಗಳಿಗೆ ಧನ್ಯವಾದ ಹೇಳುವುದರೊಂದಿಗೆ, ನಮ್ಮ ತಪ್ಪುಗಳಿಗೆ ಕ್ಷಮೆಯನ್ನೂ ಯಾಚಿಸುವ ಸಾಂಪ್ರದಾಯಿಕ ಮಾರ್ಗವಾಗಿದೆ.
ಮನಸ್ಸು ಶುದ್ಧಗೊಳ್ಳುವುದು: ಸಾಷ್ಟಾಂಗ ನಮಸ್ಕಾರ ಮಾಡುವಾಗ “ನಮಃ” ಎಂಬ ಭಾವನೆ ಮನಸ್ಸನ್ನು ಶಾಂತಗೊಳಿಸುತ್ತದೆ. ಅದು ಅಹಂಕಾರವನ್ನು ಕರಗಿಸಿ, ಮನಸ್ಸಿನಲ್ಲಿ ಶುದ್ಧತೆ ಮತ್ತು ಶ್ರದ್ಧೆಯನ್ನು ಮೂಡಿಸುತ್ತದೆ. ನಿಯಮಿತವಾಗಿ ಈ ಕ್ರಮ ಪಾಲಿಸಿದರೆ, ಆತ್ಮ ಶಾಂತಿ ಹಾಗೂ ಧ್ಯಾನಶೀಲತೆ ಹೆಚ್ಚುತ್ತದೆ.

