ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸುವ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ತೀವ್ರ ಹೊಟ್ಟೆನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ವೈದ್ಯಕೀಯ ಪರೀಕ್ಷೆಯಲ್ಲಿ ಗರ್ಭಿಣಿ ಎಂಬ ಕಹಿ ಸತ್ಯ ಬಯಲಾಗಿದೆ. ಇದಾದ ಬಳಿಕ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಬಾಲಕಿ ತಾಯಿಯಾಗಿರುವ ವಿಷಯದಿಂದ ಇಡೀ ಕುಟುಂಬ ಆಘಾತದಲ್ಲಿ ಮುಳುಗಿತ್ತು. ಆದರೆ, ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಬಾಲಕಿ ನೀಡಿದ ಹೇಳಿಕೆಯು ಮತ್ತೊಂದು ದೊಡ್ಡ ಸತ್ಯವನ್ನು ಬಯಲು ಮಾಡಿದೆ.
ಸ್ವಂತ ಅಣ್ಣನಿಂದಲೇ ಕೃತ್ಯ: ಬಾಲಕಿ ನೀಡಿದ ದೂರಿನನ್ವಯ, ಈ ಕೃತ್ಯ ಎಸಗಿದವರು ಬೇರೆ ಯಾರೂ ಅಲ್ಲ, ಆಕೆಯ 21 ವರ್ಷದ ಸ್ವಂತ ಸಹೋದರನೇ ಎಂಬುದು ತಿಳಿದುಬಂದಿದೆ. ಈ ಭೀಕರ ಘಟನೆ ತಿಳಿದ ಕೂಡಲೇ ಕೊಪ್ಪಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಬಂಧನ: ಪೊಲೀಸರು ಆರೋಪಿ ಸಹೋದರನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸರು ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ಮುಂದುವರಿಸಿದ್ದಾರೆ.

