Saturday, November 8, 2025

ಪರಿಶಿಷ್ಟರ ಹಣಕ್ಕೆ ಗ್ಯಾರಂಟಿ ‘ಬ್ರೇಕ್’! SCSP-TSP ನಿಧಿಗೆ ‘ಕೈ’ ಇಟ್ಟ ಸರ್ಕಾರ, ಬಿಜೆಪಿ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಎಸ್‌ಸಿಎಸ್‌ಪಿ-ಟಿಎಸ್‌ಪಿ (ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ) ಅನುದಾನ ದುರ್ಬಳಕೆಯ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿರಿಸಿದ ₹38,000 ಕೋಟಿಗೂ ಹೆಚ್ಚು ನಿಧಿಯನ್ನು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಸೇರಿದಂತೆ ಇತರೆ ಯೋಜನೆಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ದಾಖಲೆಗಳೊಂದಿಗೆ ಆರೋಪಿಸಿದ್ದಾರೆ.

ಆರೋಪವೇನು?
ಬಿಡುಗಡೆಯಾದ ದಾಖಲೆಗಳ ಪ್ರಕಾರ, ಸರ್ಕಾರವು ಈ ಕೆಳಕಂಡಂತೆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ:

2023-24 ರಲ್ಲಿ: ₹10,287.16 ಕೋಟಿ ರೂ.

2024-25 ರಲ್ಲಿ: ₹13,992.97 ಕೋಟಿ ರೂ.

2025-26 ರಲ್ಲಿ: ₹13,433.84 ಕೋಟಿ ರೂ.

ಈ ಒಟ್ಟು ಮೊತ್ತ ₹38,000 ಕೋಟಿಗೂ ಅಧಿಕವಾಗಿದ್ದು, ಇದು ನೇರವಾಗಿ ಎಸ್‌ಸಿ/ಎಸ್‌ಟಿ ಸಮುದಾಯಗಳ ಹಕ್ಕುಗಳನ್ನು ಹರಣ ಮಾಡಿದಂತೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಸಮರ್ಥನೆ
ಆದರೆ, ಸರ್ಕಾರವು ಈ ಅನುದಾನವನ್ನು ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ತಲುಪುವ ಗ್ಯಾರಂಟಿ ಯೋಜನೆಗಳಿಗಾಗಿಯೇ ಬಳಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಅಂಕಿ-ಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ:

ಗೃಹಲಕ್ಷ್ಮಿ: 93,79,763 ಫಲಾನುಭವಿಗಳು

ಅನ್ನ ಭಾಗ್ಯ: 2,85,12,844 ಫಲಾನುಭವಿಗಳು

ಯುವನಿಧಿ: 1,14,527 ಫಲಾನುಭವಿಗಳು

ಶಕ್ತಿ ಯೋಜನೆ: ಲಕ್ಷಾಂತರ ಮಹಿಳೆಯರು ಉಚಿತ ಪ್ರಯಾಣ

ಸೇರಿದಂತೆ ಈ ಸಮುದಾಯಗಳ ಫಲಾನುಭವಿಗಳು ಗ್ಯಾರಂಟಿ ಸೌಲಭ್ಯಗಳನ್ನು ಪಡೆದಿದ್ದಾರೆ. ಹೀಗಾಗಿ, ಈ ಯೋಜನೆಗಳಿಗೆ SCSP/TSP ಅನುದಾನವನ್ನು ಬಳಸಿರುವುದು ಸಮರ್ಥನೀಯ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಬಿಜೆಪಿ ನಾಯಕರ ಆಕ್ರೋಶ
ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಛಲವಾದಿ ನಾರಾಯಣ ಸ್ವಾಮಿ, ತಮ್ಮ ‘ಎಕ್ಸ್’ ಖಾತೆಯಲ್ಲಿ ಕಿಡಿ ಕಾರಿದ್ದಾರೆ. “SCSP/TSP ಯೋಜನೆಯ ನಿಧಿಯನ್ನು ಅನ್ಯ ಯೋಜನೆಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡಿರುವುದು ಅತ್ಯಂತ ಖಂಡನೀಯ. ಯೋಜನೆಯ ಹಣ ದುರ್ಬಳಕೆಯ ಕ್ರಮವನ್ನು ಪದೇ ಪದೇ ಸಮರ್ಥಿಸಿಕೊಳ್ಳುತ್ತಿರುವುದು ವಿಪರ್ಯಾಸ. ಇದು ಕೇವಲ ಆರ್ಥಿಕ ಅನ್ಯಾಯವಲ್ಲ, ಸಾಮಾಜಿಕ ನ್ಯಾಯದ ಧೋರಣೆಯ ಮೇಲಿನ ಗಂಭೀರ ಅವಮಾನ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಸಮುದಾಯಗಳ ಹಕ್ಕುಗಳನ್ನು ಮರುಸ್ಥಾಪಿಸಲು, ಇದುವರೆಗೆ ಬಳಕೆ ಮಾಡಿರುವ ಹಣವನ್ನು ಕೂಡಲೇ SCSP/TSP ಯೋಜನೆಗೆ ಮರಳಿ ನೀಡಬೇಕು ಎಂದು ಛಲವಾದಿ ನಾರಾಯಣ ಸ್ವಾಮಿ ಅವರು ರಾಜ್ಯ ಸರ್ಕಾರವನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.

error: Content is protected !!