Saturday, November 8, 2025

ಇತಿಹಾಸ ನಿರ್ಮಿಸಿದ ಭಾರತದ ನಾರಿಯರಿಗೆ ರಾಷ್ಟ್ರಪತಿ ಭವನದಲ್ಲಿ ಸನ್ಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಗುರುವಾರ ರಾಷ್ಟ್ರಪತಿ ಭವನದಲ್ಲಿ ಘನತೆವೆತ್ತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ಐತಿಹಾಸಿಕ ವಿಜಯ ಸಾಧಿಸಿದ ತಂಡವನ್ನು ಅಭಿನಂದಿಸಿದ ರಾಷ್ಟ್ರಪತಿ ಮುರ್ಮು, “ನೀವು ಇತಿಹಾಸ ಸೃಷ್ಟಿಸುವ ಮೂಲಕ ದೇಶದ ಮುಂದಿನ ಯುವಪೀಳಿಗೆಗೆ ಮಾದರಿಯಾಗಿದ್ದೀರಿ. ನೀವು ಬೇರೆ ಬೇರೆ ಪ್ರದೇಶ ಹಾಗೂ ಭಿನ್ನ ಹಿನ್ನೆಲೆಗಳಿಂದ ಬಂದು ಇಂದು ಭಾರತವನ್ನು ಪ್ರತಿನಿಧಿಸಿ ಆಡಿದ್ದೀರಿ. ನಿಮ್ಮನ್ನು ನೋಡಿದರೆ ಭಾರತದ ಪ್ರತಿಬಿಂಬವೇ ಕಾಣುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸ್ಮರಣೀಯ ಭೇಟಿಯ ಸಂದರ್ಭದಲ್ಲಿ, ಟೀಂ ಇಂಡಿಯಾ ಆಟಗಾರ್ತಿಯರೆಲ್ಲರೂ ರಾಷ್ಟ್ರಪತಿಯವರೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಸನ್ಮಾನದ ಪ್ರತೀಕವಾಗಿ, ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯರು ಸಹಿ ಮಾಡಿದ ಅಧಿಕೃತ ಜರ್ಸಿಯನ್ನು ರಾಷ್ಟ್ರಪತಿ ಮುರ್ಮು ಅವರಿಗೆ ಉಡುಗೊರೆಯಾಗಿ ನೀಡಿದರು.

ಇದಕ್ಕೆ ಮೊದಲು, ಬುಧವಾರ (ನವೆಂಬರ್ 5) ರಂದು ಟೀಂ ಇಂಡಿಯಾ ಆಟಗಾರ್ತಿಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಅವರನ್ನು ಭೇಟಿಯಾಗಿ, ತಮ್ಮ ಗೆಲುವಿನ ಸಂತಸವನ್ನು ಹಂಚಿಕೊಂಡಿದ್ದರು ಮತ್ತು ಮಹತ್ವದ ಮಾತುಕತೆ ನಡೆಸಿದ್ದರು.

error: Content is protected !!