Saturday, November 8, 2025

ಬೆಳಗಾವಿಯಲ್ಲಿ ಕಬ್ಬು ರೈತರ ರಣಕಹಳೆ: ಸಚಿವರಿಗೆ ‘ನಾಳೆ ಸಂಜೆ’ ಡೆಡ್‌ಲೈನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಾದ್ಯಂತ ಕಬ್ಬು ಬೆಳೆಗಾರರ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅದರಲ್ಲೂ ಮುಖ್ಯವಾಗಿ ಬೆಳಗಾವಿಯಲ್ಲಿ ಪ್ರತಿಭಟನೆಯು ಉಗ್ರ ರೂಪ ತಳೆದಿದೆ. ಕಳೆದ ಎಂಟು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರ ಆಕ್ರೋಶದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಧಾವಿಸಿದ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಅವರು, “ಎರಡು ದಿನಗಳ ಸಮಯ ಕೊಡಿ, ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು” ಎಂದು ಮನವಿ ಮಾಡಿ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರು.

ಆದರೆ, ಸಚಿವರ ಭರವಸೆಗೆ ಮಣಿಯದ ರೈತರು, ತಮ್ಮ ಪಟ್ಟು ಸಡಿಲಿಸದೆ ಸಚಿವರ ವಿರುದ್ಧವೇ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸಚಿವರಿಗೆ ನೇರವಾದ ಎಚ್ಚರಿಕೆ ನೀಡಿದ ರೈತರು, “ಎರಡು ದಿನಗಳ ಕಾಲಾವಕಾಶ ಇಲ್ಲ. ನಾಳೆ, ಅಂದರೆ ನವೆಂಬರ್ 07ರ ಸಂಜೆಯೊಳಗೆ ಪ್ರತಿ ಕ್ವಿಂಟಾಲ್ ಕಬ್ಬಿಗೆ ₹3,500 ದರ ನಿಗದಿ ಮಾಡಿ ಆದೇಶ ಹೊರಡಿಸಬೇಕು,” ಎಂದು ಸ್ಪಷ್ಟಪಡಿಸಿದರು.

ತಮ್ಮ ಬೇಡಿಕೆ ಈಡೇರದಿದ್ದರೆ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ರೈತರು ಅಂತಿಮ ಗಡುವು ನೀಡಿದ್ದಾರೆ. ಇದರಿಂದಾಗಿ ಸರ್ಕಾರವು ಗಂಭೀರ ಸವಾಲನ್ನು ಎದುರಿಸುವಂತಾಗಿದೆ.

error: Content is protected !!