ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬು ಬೆಳೆಗಾರರ ಪ್ರತಿಭಟವೆ ತೀವ್ರಗೊಂಡ ಬೆನ್ನಲ್ಲೇ ಪ್ರತಿ ಟನ್ ಕಬ್ಬಿಗೆ 3,300 ರೂ. ದರವನ್ನು ಸರ್ಕಾರ ನಿಗದಿ ಮಾಡಿದೆ.
ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ನಿರ್ಧಾರಕ್ಕೆ ಕಬ್ಬು ಬೆಳೆಗಾರರು ಒಪ್ಪಿಗೆ ನೀಡಿದ್ದಾರೆ. ಬೆಳಗಾವಿ ಗುರ್ಲಾಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.
ಕೇಂದ್ರ ಸರ್ಕಾರ ಶೇ.10.25 ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,550 ರೂ. ಎಫ್‍ಆರ್‌ಪಿ ದರವನ್ನು ನಿಗದಿ ಮಾಡಿತ್ತು. ಆದರೆ ಕರ್ನಾಟಕದಲ್ಲಿ ಸರಾಸರಿ ಇಳುವರಿ ಶೇ.9.5 ಮಾತ್ರ ಇದೆ. ಹೀಗಾಗಿ 3,550 ರೂ. ನೀಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಪಟ್ಟು ಹಿಡಿದಿದ್ದರು. ಇನ್ನೊಂದು ಕಡೆ ರೈತರು ಗುಜರಾತ್, ಮಹಾರಾಷ್ಟ್ರದಲ್ಲಿ 3,500 ರೂ. ನೀಡುವಾಗ ನಮಗೆ ಯಾಕೆ ಕಡಿಮೆ ಹಣ ನೀಡಲಾಗುತ್ತಿದೆ ಎಂದು ಪ್ರಶ್ನಿಸಿ ಪ್ರತಿಭಟನೆಗೆ ಇಳಿದಿದ್ದರು.
ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸರ್ಕಾರ ರೈತರು ಮತ್ತು ಕಾರ್ಖಾನೆ ಮಾಲೀಕರ ಜೊತೆ ಸಂಧಾನ ನಡೆಸಿತ್ತು. ರೈತರು ಮತ್ತು ಕಾರ್ಖಾನೆ ಮಾಲೀಕರು ತಮ್ಮ ಹಠದಿಂದ ಹಿಂದಕ್ಕೆ ಸರಿಯಾದ ಕಾರಣ ಜಟಿಲವಾಗಿತ್ತು. ಈಗ ಸರ್ಕಾರ 50 ರೂ. ನೀಡುವುದಾಗಿ ಹೇಳಿದ ನಂತರ ಮಾಲೀಕರು ಪಟ್ಟು ಸಡಿಲಿಸಿ 50 ರೂ. ನೀಡುವುದಾಗಿ ಒಪ್ಪಿಕೊಂಡಿದ್ದಾರೆ.
3,300 ರೂಪಾಯಿಯಲ್ಲಿ ಕಾರ್ಖಾನೆಗಳು 3,250 ರೂ. ನೀಡಬೇಕಾಗುತ್ತದೆ. ಸರ್ಕಾರ ಸಹಾಯಧನವಾಗಿ 50 ರೂ. ನೀಡಲಿದೆ. ಈ ಪೈಕಿ 3,200 ರೂಪಾಯಿಯನ್ನ ಕಾರ್ಖಾನೆಗಳು ಒಂದೇ ಕಂತಿನಲ್ಲಿ ಕೊಡಬೇಕು. ಉಳಿದ 50 ರೂ. 6 ತಿಂಗಳ ನಂತರ ಕಾರ್ಖಾನೆಗಳು ಕೊಡಬೇಕು. 50 ರೂ. ಸಹಾಯಧನ ಸರ್ಕಾರ ನೀಡಲಿದೆ.

