Monday, January 12, 2026

ಲಿಫ್ಟ್‌ ಕೇಬಲ್ ತುಂಡಾಗಿ ಬಿದ್ದು ಇಬ್ಬರು ಕಾರ್ಮಿಕರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಟ್ಟಡ ಕಾಮಗಾರಿಯ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಸಂಭವಿಸಿದೆ.

ಮುರುಡೇಶ್ವರ ಬಸ್ತಿಯ ಪ್ರಭಾಕರ್ ಮುತಪ್ಪ ಶೆಟ್ಟಿ (48) ಹಾಗೂ ಕುಂದಾಪುರ ತಾಲೂಕಿನ ಗೋಳಿಹೊಳೆಯ ಬಾಬಣ್ಣ ಪೂಜಾರಿ (45) ಮೃತ ಕಾರ್ಮಿಕರಾಗಿದ್ದಾರೆ. ಕಾಮತ್ ಯಾತ್ರಿ ನಿವಾಸದ ಮಾಲೀಕ ವೆಂಕಟದಾಸ ಕಾಮತ್ ಅವರ ಹೊಸ ಕಟ್ಟಡ ಕಾಮಗಾರಿಯಲ್ಲಿ ಮಿನಿ ಲಿಫ್ಟ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಈ ದುರಂತ ನಡೆದಿದೆ.

ಕಟ್ಟಡದ ಮೇಲ್ಮಹಡಿಗಳಿಗೆ ವಸ್ತುಗಳನ್ನು ಸಾಗಿಸಲು ತಾತ್ಕಾಲಿಕ ಲಿಫ್ಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಲಿಫ್ಟ್‌ನ ಸೇಫ್ಟಿ ಲಾಕ್ ಹಾಳಾಗಿ ಕೇಬಲ್ ಕಟ್ ಆಗಿದ್ದರಿಂದ, ಇಬ್ಬರು ಕಾರ್ಮಿಕರು ಇದ್ದ ಲಿಫ್ಟ್ ಕೆಳಕ್ಕೆ ಬಿದ್ದಿದೆ. ಇದರಿಂದ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು.

ಅವರನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದರು. ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!