ಹೊಸದಿಗಂತ ವರದಿ ರಾಣೆಬೆನ್ನೂರ:
ಪ್ರೀತಿಸಿದ ಯುವಕ ಯುವತಿ ಜತೆಗೆ ಸಲುಗೆ ಬೆಳೆಸಿ, ಕೊನೆಗೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತಳ ಕುಟುಂಬದವರು ಯುವಕ ಮನೆ ಎದುರು ಯುವತಿಯ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬ್ಯಾಡಗಿ ತಾಲೂಕಿನ ಶಂಕ್ರಿಪುರ ಗ್ರಾಮದ ಸಿಂಧೂರಿ ಪರಮೇಶಪ್ಪ ಪರಮಣ್ಣನವರ (25) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಈಕೆಯನ್ನು ಕುದರಿಹಾಳ ಗ್ರಾಮದ ಯುವಕ ಶರತ ನೀಲಪ್ಪನವರ ಎಂಬುವನು ಮೂರು ವರ್ಷದಿಂದ ಪ್ರೀತಿ ಮಾಡುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಆದರೆ, ಮದುವೆ ವಿಚಾರ ಬಂದಾಗ ಶರತ್ ಆಕೆಯನ್ನು ನಿಕಾರಿಸಿದ್ದ. ಇದರಿಂದ ಮನನೊಂದ ಸಿಂಧೂರಿ ಶುಕ್ರವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಪೊಲೀಸರಿಂದ ಲಂಚದ ಆರೋಪ
ಒಂದು ವಾರದ ಹಿಂದೆ ಸಿಂಧೂರಿ ಹಾಗೂನ ಕುಟುಂಬದವರು ತನಗೆ ಆಗಿರುವ ಅನ್ಯಾಯದ ಕುರಿತು ರಾಣೆಬೆನ್ನೂರ ಗ್ರಾಮೀಣ ಪೊಲೀಸರಿಗೆ ತಿಳಿಸಿ ದೂರು ನೀಡಲು ಬಂದಿದ್ದಳು. ಆದರೆ, ಪೊಲೀಸರು ಎರಡು ಕುಟುಂಬದವರನ್ನು ಕರೆಯಿಸಿ ರಾಜಿ ಪಂಚಾಯಿತಿ ಮಾಡಿ ಕಳುಹಿಸಿದ್ದರು. ಪೊಲೀಸರು ಶರತ್ ಕಡೆಯಿಂದ ಹಣ ಪಡೆದು ಯುವತಿಗೆ ಬುದ್ಧಿ ಹೇಳಿ ಕಳುಹಿಸಿದ್ದರು. ಇದರಿಂದ ಸಿಂಧೂರಿ ನ್ಯಾಯ ಸಿಗಲಿಲ್ಲವೆಂದು ಮನನೊಂದಿದ್ದಳು ಎಂಬ ಆರೋಪ ಕೇಳಿ ಬಂದಿದೆ.

