ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕೆರೆಯಲ್ಲಿ ಮೀನು ಹಿಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲೂಕಿನ ದಿಗುವನೆಟ್ಟಕುಂಟಪಲ್ಲಿ ಗ್ರಾಮದ ಬಳಿ ನಡೆದಿದೆ.
ದಿಗುವನೆಟ್ಟಕುಂಟಪಲ್ಲಿ ಗ್ರಾಮದ ಅಶಾಬೀ (54) ಮೃತ ದುರ್ದೈವಿ. ಆಶಾಬೀ ಹಾಗೂ ಪತಿ ಮಾಬುಸಾಬ್ ಮೀನು ಹಿಡಿಯುವ ಕಾಯಕದಿಂದ ಜೀವನ ನಡೆಸುತ್ತಿದ್ದರು. ಪತಿ ಮಾಬುಸಾಬ್ ಜೊತೆ ಮೀನು ಹಿಡಿಯಲು ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಹಗಲಿನಲ್ಲಿ ಕೆರೆಯಲ್ಲಿ ಬಲೆ ಹಾಕಿ ರಾತ್ರಿ ವೇಳೆ ಮೀನುಗಳನ್ನ ಹಿಡಿಯಲು ಹೋಗಿದ್ದರು. ತೆಪ್ಪದಲ್ಲಿ ಹೋಗಿದ್ದ ವೇಳೆ ಕೆರೆ ಒಳಗೆ ಇರುವ ವಿದ್ಯುತ್ ಕಂಬದ ತಂತಿ ತಗುಲಿ ದುರಂತ ನಡೆದಿದ್ದು, ವಿದ್ಯುತ್ ಶಾಕ್ ಹೊಡೆದು ಕೆರೆಯಲ್ಲಿ ಬಿದ್ದು ಆಶಾಬೀ ಮೃತಪಟ್ಟಿದ್ದಾರೆ.
ಕೆರೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ಕಂಬದಿಂದ ತಂತಿ ಕಟ್ ಆಗಿ ನೀರಿನಲ್ಲಿ ನೇತಾಡುತ್ತಿತ್ತು. ವಿದ್ಯುತ್ ತಂತಿ ಕಟ್ ಆಗಿ ಬಿದ್ದಿದ್ದರಿಂದಲೇ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಪತಿ ಮಾಬುಸಾಬ್‌ಗೂ ವಿದ್ಯುತ್ ಶಾಕ್ ಹೊಡೆದು ಗಾಯಗಳಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಮಹಿಳೆಯ ಶವ ಹೊರಕ್ಕೆ ತೆಗೆದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೀನಿನ ಬಲೆಯಿಂದಲೇ ಶವ ಹೊರಕ್ಕೆ ತೆಗೆದಿದ್ದಾರೆ. ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೆರೆಯಲ್ಲಿ ಮೀನು ಹಿಡಿಯುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

