ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕನ ತಪ್ಪಿನಿಂದ ಪುಟ್ಟ ಬಾಲಕ ಬಲಿಯಾದ ಘಟನೆ ನಿನ್ನೆ ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ಸಂಭವಿಸಿದೆ.
ಪ್ರಣವ್ (1 ವರ್ಷ 8 ತಿಂಗಳು) ಮೃತ ಬಾಲಕ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಅವಘಡದಲ್ಲಿ ಗೋಡೆ ಕುಸಿದ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದು, ಹೆಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸ ಮನೆಯೊಂದರ ಮೋಲ್ಡಿಂಗ್ ನಿರ್ಮಾಣ ಕೆಲಸಕ್ಕಾಗಿ ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಕರೆಸಲಾಗಿತ್ತು. ಕೆಲಸ ಮುಗಿಸಿ ಸಂಜೆ 4 ಗಂಟೆ ಸುಮಾರಿಗೆ ತೆರಳುತ್ತಿದ್ದ ಲಾರಿಯ ಮೇಲ್ಭಾಗಕ್ಕೆ ವಿದ್ಯುತ್ ವೈರ್ ಸಿಕ್ಕಿಹಾಕಿಕೊಂಡಿತ್ತು. ಅದನ್ನ ಗಮನಿಸದ ಚಾಲಕ ಲಾರಿ ಚಲಾಯಿಸಿದ ಪರಿಣಾಮ ವೈರಿಂಗ್ ಕಂಬ ಕಿತ್ತುಕೊಂಡು, ಮನೆಯೊಂದರ ಗೋಡೆ ಕುಸಿದಿದೆ. ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಪ್ರಣವ್ ಮೇಲೆ ಗೋಡೆಯ ಅವಶೇಷಗಳು ಬಿದ್ದಿವೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರಣವ್‌ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.
ಇದ್ದ ಒಬ್ಬ ಪುತ್ರನನ್ನು ಕಳೆದುಕೊಂಡ ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದೆ. ಘಟನೆಗೂ ಎರಡು ನಿಮಿಷಗಳ ಮುನ್ನ ಬಾಲಕನ ತಂದೆ ಆತನನ್ನು ಆಟವಾಡಿಸುತ್ತಿದ್ದರು. ಅವರು ಕ್ಯಾನ್‌ನಲ್ಲಿ ನೀರು ತರಲು ಹೋದಾಗ ಬಾಲಕ ಆಟವಾಡುತ್ತಿದ್ದ. ಬೆಳಗ್ಗೆಯಿಂದ ಎರಡ್ಮೂರು ಸಲ ಲಾರಿ ಬಂದು ಹೋಗಿತ್ತು. ಸಂಜೆ ಕೆಲಸ ಮುಗಿಸಿ ತೆರಳುವಾಗ ಅವಘಡ ಸಂಭವಿಸಿದೆ ಎಂದು ಸ್ಥಳೀಯ ನಿವಾಸಿ ಸಂಜಯ್ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳ ಪರಿಶೀಲನೆ ನಡೆಸಿದ ಹೆಚ್ಎಎಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

