ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಮೌಲ್ಯ ಹಾಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ವಾಗ್ದಾಳಿ ನಡೆಸಿದರು. ಚುನಾವಣಾ ಆಯೋಗ ಮತ್ತು ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ‘ವೋಟ್ ಚೋರಿ’ ಅಭಿಯಾನದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಬಿಜೆಪಿಯವರು ಕೇವಲ ಸುಳ್ಳು ಹೇಳುವುದರಲ್ಲಿ ಮಾತ್ರವಲ್ಲ, ಮತಗಳ್ಳತನದಲ್ಲೂ ನಿಸ್ಸೀಮರು ಎನ್ನುವುದು ಸ್ಪಷ್ಟವಾಗಿ ಸಾಬೀತಾಗಿದೆ. ಇದನ್ನು ನಾವು ಸಹಿಸುವುದಿಲ್ಲ,” ಎಂದು ಮುಖ್ಯಮಂತ್ರಿಗಳು ಗುಡುಗಿದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ತಾವು ಹೋರಾಟದ ಮಾರ್ಗವನ್ನು ಅನುಸರಿಸುವುದಾಗಿ ಅವರು ಘೋಷಿಸಿದರು. ಮತಗಳ್ಳತನದ ಮೂಲಕವೇ ಬಿಜೆಪಿ ಹಲವು ರಾಜ್ಯಗಳ ವಿಧಾನಸಭೆಗಳಲ್ಲಿ ಮತ್ತು ಲೋಕಸಭೆಯಲ್ಲಿ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ನಿರಂತರ ಅಧ್ಯಯನ ಮತ್ತು ತಪಾಸಣೆ ನಡೆಸಿ, ದಾಖಲೆಗಳ ಸಮೇತವಾಗಿ ಮತಗಳ್ಳತನದ ಸತ್ಯವನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಅವರು ವಿವರಿಸಿದರು.

