Monday, November 10, 2025

ಹಗಲು ಧರ್ಮಪಾಠ, ರಾತ್ರಿ ಕಳ್ಳತನ: ಮನೆಗೆ ಕನ್ನ ಹಾಕುತ್ತಿದ್ದ ‘ಶಿಕ್ಷಕ’ ಅಂದರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಕಡೆ ಮಸೀದಿಯಲ್ಲಿ ಧರ್ಮ ಬೋಧನೆ. ಮತ್ತೊಂದು ಕಡೆ ಮನೆಗಳಿಗೆ ಕನ್ನ ಹಾಕಿ ಕಳ್ಳತನದ ದಂಧೆ! ಇಂತಹ ವಿಚಿತ್ರ ದ್ವಿಪಾತ್ರ ನಡೆಸುತ್ತಿದ್ದ ಕುರಾನ್ ಶಿಕ್ಷಕನನ್ನು ಕಲಬುರಗಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲಬಾಧೆ ಮತ್ತು ಕೌಟುಂಬಿಕ ಆರ್ಥಿಕ ಸಂಕಷ್ಟದಿಂದ ಪಾರಾಗಲು ಈತ ಕಳ್ಳತನದ ಹಾದಿ ತುಳಿದಿದ್ದಾಗಿ ತಿಳಿದುಬಂದಿದೆ.

ಮಹ್ಮದ್ ಆರೀಫ್ ಅಲಿ ಬಂಧಿತ ಶಿಕ್ಷಕನಾಗಿದ್ದು, ಈತ ಕಲಬುರಗಿ ನಗರದ ಬಿಲಾಲಬಾದ್ ಕಾಲೋನಿಯ ನಿವಾಸಿ. ಈತ ಮಸೀದಿಯೊಂದರಲ್ಲಿ ಕುರಾನ್ ಬೋಧನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಆದರೆ ಕಳೆದ ಏಳೆಂಟು ತಿಂಗಳಿಂದ ಕಳ್ಳತನದ ವೃತ್ತಿ ಆರಂಭಿಸಿದ್ದ.

ಕಳ್ಳತನ ದಂಧೆ ಹೇಗಿತ್ತು?

ಶಿಕ್ಷಕ ಮಹ್ಮದ್ ಆರೀಫ್ ಅಲಿ, ಬೆಳಿಗ್ಗೆ ಮಸೀದಿಯಲ್ಲಿ ಕುರಾನ್ ಪಾಠ ಮುಗಿಸಿ, ಮಧ್ಯಾಹ್ನ ಮತ್ತು ಸಂಜೆ ವೇಳೆ ತನ್ನ ಬೈಕ್‌ನಲ್ಲಿ ನಗರದ ಬಡಾವಣೆಗಳಲ್ಲಿ ಸುತ್ತಾಡುತ್ತಿದ್ದ. ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಜನ ಗಾಢ ನಿದ್ರೆಯಲ್ಲಿರುವ ನಸುಕಿನ ಜಾವ 3 ಗಂಟೆಯ ನಂತರ ಕಬ್ಬಿಣದ ರಾಡ್ ಬಳಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ.

ವಿಶೇಷವಾಗಿ ಹೆಚ್ಚು ಮುಸ್ಲಿಮರು ವಾಸಿಸುವ ತಾಜ್ ನಗರ, ರಾಜಪುರ ರೋಡ್ ಸೇರಿದಂತೆ ವಿವಿ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳ್ಳತನಗಳನ್ನು ನಡೆಸುತ್ತಿದ್ದ. ಕುಟುಂಬ ನಿರ್ವಹಣೆ ಮತ್ತು ಸಾಲ ತೀರಿಸಲು ಬರುತ್ತಿದ್ದ 10-12 ಸಾವಿರ ರೂ. ಸಂಬಳ ಸಾಕಾಗದೇ ಈ ಮಾರ್ಗ ಹಿಡಿದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಬಲೆಗೆ ಬಿದ್ದ ಖದೀಮ!

ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿದ ನಿರಂತರ ಮನೆಗಳ್ಳತನ ಪ್ರಕರಣಗಳು ಪೊಲೀಸರಿಗೆ ದೊಡ್ಡ ಸವಾಲಾಗಿದ್ದವು. ಪ್ರಕರಣದ ತನಿಖೆಗಿಳಿದ ಪೊಲೀಸರು, ಬಡಾವಣೆಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅನುಮಾನಾಸ್ಪದ ವ್ಯಕ್ತಿಯ ಚಲನವಲನಗಳು ಪತ್ತೆಯಾದವು. ಇದರ ಆಧಾರದ ಮೇಲೆ ಮಹ್ಮದ್ ಆರೀಫ್ ಅಲಿಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕುರಾನ್ ಶಿಕ್ಷಕನ ಕಳ್ಳತನದ ಸತ್ಯ ಬಯಲಾಗಿದೆ.

ಬಂಧಿತ ಆರೋಪಿಯಿಂದ ವಿಶ್ವವಿದ್ಯಾಲಯ ಠಾಣಾ ಪೊಲೀಸರು 100 ಗ್ರಾಂ ಚಿನ್ನಾಭರಣ, 16 ಸಾವಿರ ರೂ ಮೌಲ್ಯದ ಬೆಳ್ಳಿ, ಕಳ್ಳತನಕ್ಕೆ ಬಳಸಿದ ಬೈಕ್ ಸೇರಿದಂತೆ ಒಟ್ಟು 13.41 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ವಿವಿ ಠಾಣಾ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಗೆ ಕಲಬುರಗಿ ನಗರ ಪೊಲೀಸ್ ಇಲಾಖೆ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದೆ.

error: Content is protected !!