Tuesday, November 11, 2025

‘ದೆವ್ವ’ ಹೆಸರಲ್ಲಿ ಮಹಿಳೆಗೆ ನರಕ ದರುಶನ: ಮದ್ಯ-ಬೀಡಿ ಸೇದಿಸಿ ದೈಹಿಕ ಚಿತ್ರಹಿಂಸೆ, ಮೂವರ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಕೊಟ್ಟಾಯಂನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಮಾಟಮಂತ್ರ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಗಂಟೆಗಟ್ಟಲೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ. ಬಲವಂತವಾಗಿ ಬೀಡಿ ಸೇದಿಸಿ, ಮದ್ಯ ಸೇವಿಸಲು ಒತ್ತಾಯಿಸಿ, ದೇಹಕ್ಕೆ ಸುಟ್ಟ ಗಾಯಗಳನ್ನು ಮಾಡಿರುವ ಕುರಿತು ಮಹಿಳೆ ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಅಖಿಲ್ ದಾಸ್ (26), ಪತಿಯ ತಂದೆ ದಾಸ್ (54) ಮತ್ತು ಮಾಂತ್ರಿಕ ಶಿವದಾಸ್ (54) ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಅತ್ತೆ ಪ್ರಮುಖ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ.

ಘಟನೆ ವಿವರ:
ಪೊಲೀಸರ ಮಾಹಿತಿ ಪ್ರಕಾರ, ಕಳೆದ ವಾರ ಮಹಿಳೆಯ ಅತ್ತೆ ಅವರು ಮಾಂತ್ರಿಕನ ಬಳಿ ಹೋಗಿ ತಮ್ಮ ಸೊಸೆಯ ಮೇಲೆ ಮೃತ ಸಂಬಂಧಿಕರ ದೆವ್ವ ಆವರಿಸಿಕೊಂಡಿದೆ ಎಂದು ಹೇಳಿ ಮಾಟಮಂತ್ರಕ್ಕೆ ವ್ಯವಸ್ಥೆ ಮಾಡಿದ್ದರು.

ಬೆಳಗ್ಗೆ 11 ಗಂಟೆಗೆ ಆರಂಭವಾದ ಮಾಟಮಂತ್ರವು ರಾತ್ರಿಯವರೆಗೂ ಮುಂದುವರೆದಿದೆ. ಈ ಸಂದರ್ಭದಲ್ಲಿ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಲಾಯಿತು, ಬೀಡಿ ಸೇದಿಸಲಾಯಿತು ಮತ್ತು ಬೂದಿಯನ್ನು ಸಹ ತಿನ್ನಿಸಲಾಯಿತು. ಕಿರುಕುಳದ ತೀವ್ರತೆ ಹೆಚ್ಚಿದ್ದು, ಆಕೆಯ ಮೇಲೆ ಸುಟ್ಟ ಗಾಯಗಳನ್ನು ಮಾಡಿ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ದೌರ್ಜನ್ಯ ತಾಳಲಾರದೆ ಮಹಿಳೆ ಕೊನೆಗೆ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ.

ಪೊಲೀಸರ ಕ್ರಮ:
ಘಟನೆಯ ಬಗ್ಗೆ ಮಹಿಳೆಯ ತಂದೆ ದೂರು ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದರು. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿ ಮಾಂತ್ರಿಕ ಶಿವದಾಸ್ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆದರೆ, ಪೊಲೀಸರು ಕೊನೆಗೆ ಆತನನ್ನು ತಿರುವಲ್ಲಾದ ಮುತ್ತೂರು ಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.

ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಹಿಳೆಯ ಅತ್ತೆ ಸದ್ಯ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

error: Content is protected !!