Tuesday, November 11, 2025

ರಸ್ತೆಗುಂಡಿ, ಕಸವೇ ಅಸ್ತ್ರ: ಬಿಜೆಪಿ ನಾಯಕರಿಂದ ‘ಪಾಯಿಂಟ್ ಇನ್‌ಸ್ಪೆಕ್ಷನ್’ ಪ್ರತಿಭಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆಗುಂಡಿಗಳನ್ನು ಮುಚ್ಚಲು ಸರ್ಕಾರ ಪದೇ ಪದೇ ಗಡುವು ನೀಡುತ್ತಿದ್ದರೂ ಬೆಂಗಳೂರಿನಲ್ಲಿ ಕಾಮಗಾರಿಗಳು ಪ್ರಗತಿ ಕಾಣದಿರುವುದು ಹಾಗೂ ಹೆಚ್ಚುತ್ತಿರುವ ಕಸದ ಸಮಸ್ಯೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷ ಇಂದು ಎರಡನೇ ಹಂತದ ‘ಗುಂಡಿ ಮತ್ತು ಕಸ ಚಳುವಳಿ’ಯನ್ನು ಆರಂಭಿಸಿದೆ.

ಜನರ ಆಕ್ರೋಶಕ್ಕೆ ಸರ್ಕಾರ ಕಿವುಡಾಗಿದೆ ಎಂದು ಆರೋಪಿಸಿರುವ ಬಿಜೆಪಿ, ನಾಗರಿಕ ಸಮಸ್ಯೆಗಳ ಕುರಿತು ಧ್ವನಿಯಾಗುವ ಪ್ರಯತ್ನ ಮಾಡಿದೆ. ಈ ಬಾರಿ ರಸ್ತೆಗುಂಡಿಗಳ ಜೊತೆಗೆ ಕಸ ವಿಲೇವಾರಿ ವೈಫಲ್ಯವನ್ನು ಕೇಸರಿ ಪಡೆ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದೆ.

ಗುಂಡಿಗೆ ‘ಬ್ರ್ಯಾಂಡ್ ಬೆಂಗಳೂರು’ ಲೇಪನ

ಬಿಜೆಪಿ ನಾಯಕರಾದ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ, ಸುರೇಶ್ ಕುಮಾರ್, ಪಿ.ಸಿ ಮೋಹನ್, ಮುನಿರತ್ನ ಸೇರಿದಂತೆ ಇತರ ಮುಖಂಡರು ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳಲ್ಲಿ ‘ಪಾಯಿಂಟ್ ಇನ್‌ಸ್ಪೆಕ್ಷನ್’ ನಡೆಸಿದರು.

ಮೊದಲಿಗೆ ವಿಜಯನಗರ-ನಾಗರಭಾವಿ ಮುಖ್ಯರಸ್ತೆಯಲ್ಲಿ ಮುಚ್ಚದೆ ಉಳಿದಿದ್ದ ರಸ್ತೆಗುಂಡಿಯ ಸುತ್ತಲೂ ವೈಟ್ ಪೇಂಟ್ ಸ್ಪ್ರೇ ಮಾಡಲಾಯಿತು. ಇಷ್ಟಕ್ಕೆ ನಿಲ್ಲದ ನಾಯಕರು, ಅದೇ ಗುಂಡಿಯ ಮೇಲೆ “ಇದು ಬ್ರ್ಯಾಂಡ್ ಬೆಂಗಳೂರು” ಎಂದು ಪೇಂಟ್ ಸ್ಪ್ರೇ ಮೂಲಕ ವಿಡಂಬನಾತ್ಮಕವಾಗಿ ಬರೆದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನಾಯಕರು ಕೈಯಲ್ಲಿ ಘೋಷಣಾ ಫಲಕಗಳನ್ನು ಹಿಡಿದು ಅಭಿಯಾನ ನಡೆಸಿದರು.

ಕಸದ ರಾಶಿ ನಡುವೆಯೇ ಪ್ರತಿಭಟನೆ

ಇದೇ ವೇಳೆ, ಗೋವಿಂದರಾಜನಗರ ಕ್ಷೇತ್ರದ 12ನೇ ಮುಖ್ಯ ರಸ್ತೆಯಲ್ಲಿ ಹಲವು ದಿನಗಳಿಂದ ವಿಲೇವಾರಿಯಾಗದೆ ರಸ್ತೆ ಹಾಗೂ ಫುಟ್‌ಪಾತ್ ಮೇಲೆ ಚೆಲ್ಲಾಪಿಲ್ಲಿಯಾಗಿದ್ದ ಕಸದ ರಾಶಿಯ ಸ್ಥಳಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿತು. ಪ್ಲೇಕಾರ್ಡ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ನಾಯಕರಿಗೆ ಸ್ಥಳೀಯರು, ಕಸ ವಿಲೇವಾರಿ ಮಾಡದೇ ಇರುವ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕುಂಠಿತ ಕಾಮಗಾರಿಗಳ ಮೇಲೂ ದನಿ

ಗೋವಿಂದರಾಜನಗರ ಕ್ಷೇತ್ರದ 17ನೇ ಮುಖ್ಯ ರಸ್ತೆಯಲ್ಲಿನ ಮತ್ತೊಂದು ಬೃಹತ್ ರಸ್ತೆಗುಂಡಿಗೆ ಬಣ್ಣ ಬಳಿದು ಪ್ರತಿಭಟನೆಯನ್ನು ಮುಂದುವರೆಸಲಾಯಿತು. ಅಲ್ಲದೆ, ಅಪೂರ್ಣಗೊಂಡ ಒಳಚರಂಡಿ ಮತ್ತು ರಸ್ತೆ ಕಾಮಗಾರಿ ಸ್ಥಳಕ್ಕೂ ನಾಯಕರು ಭೇಟಿ ನೀಡಿದರು. ಕುಂಟುತ್ತಾ ಸಾಗುತ್ತಿರುವ ಕಾಮಗಾರಿಯ ಮೋರಿ ಮೇಲೆ ಪ್ಲೇಕಾರ್ಡ್‌ಗಳನ್ನು ಹಿಡಿದುಕೊಂಡು ಕುಳಿತು ಬಿಜೆಪಿ ನಾಯಕರು ಆಡಳಿತದ ವಿಳಂಬ ಧೋರಣೆಯ ವಿರುದ್ಧ ಪ್ರತಿಭಟನೆ ನಡೆಸಿದರು.

error: Content is protected !!