Monday, November 10, 2025

ಕಾಫಿ ಪುಡಿ ಬೆಲೆಯಲ್ಲಿ ಭಾರೀ ಏರಿಕೆ: ಚಳಿಗಾಲದಲ್ಲಿ ಸುಡುತ್ತಿದೆ ಬಿಸಿಬಿಸಿ ಕಾಫಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಳಿಗಾಲ ಆರಂಭವಾಗುತ್ತಿದ್ದಂತೆ ಬೆಳಗಿನ ಚುಮುಚುಮು ತಂಪಿಗೆ ಬಿಸಿ ಕಾಫಿಯ ಸವಿ ಅನುಭವಿಸಲು ಎಲ್ಲರಿಗೂ ಆಸೆ ಮೂಡುತ್ತದೆ. ಆದರೆ ಈಗ ಆ ಕಾಫಿ ಕಪ್‌ನ ಬೆಲೆ ಜನರ ಜೇಬಿಗೆ ಹೊರೆ ಆಗಿದೆ. ಏಕೆಂದರೆ, ಕಾಫಿ ಪುಡಿ ಬೆಲೆಯಲ್ಲಿ ಈಗ ಭಾರೀ ಏರಿಕೆ ದಾಖಲಾಗಿದೆ.

ಮುಂಬರುವ ದಿನಗಳಲ್ಲಿ ಒಂದು ಕೆ.ಜಿ ಕಾಫಿ ಪುಡಿಗೆ 800 ರಿಂದ 1200 ರೂಪಾಯಿವರೆಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ವ್ಯಾಪಾರಸ್ಥರ ಪ್ರಕಾರ, ಮುಂದಿನ ತಿಂಗಳು ಬೆಲೆ ಮತ್ತೆ 200 ರೂಪಾಯಿವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ. 2022ರಲ್ಲಿ ಕಾಫಿ ಪುಡಿ ಕೆ.ಜಿಗೆ 300-400 ರೂಪಾಯಿ ಇದ್ದರೆ, ಈಗ ಅದರ ಬೆಲೆ ಮೂರರಷ್ಟು ಏರಿಕೆಯಾಗಿದೆ. ಕೇವಲ ಕಳೆದ ಒಂದು ವರ್ಷದಲ್ಲೇ ಕಾಫಿ ಬೆಲೆಯಲ್ಲಿ 200 ರೂಪಾಯಿವರೆಗೆ ಹೆಚ್ಚಳ ದಾಖಲಾಗಿದೆ.

ಈ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ತಗುಲಿದ್ದು, ಹೋಟೆಲ್ ಅಸೋಸಿಯೇಷನ್ ಪ್ರಕಾರ ತಕ್ಷಣವೇ ಕಾಫಿ ದರ ಹೆಚ್ಚಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಲಾಭದ ಅಂಚು ಕುಸಿದಿದ್ದು, ವ್ಯಾಪಾರಿಗಳಿಗೆ ಇದು ಕಠಿಣ ಸಮಯವಾಗಿದೆ.

ಕಾಫಿ ಅಥವಾ ಟೀ ಇಲ್ಲದೇ ದಿನ ಆರಂಭವಾಗದವರ ಸಂಖ್ಯೆ ಅನೇಕ. ವಿಶೇಷವಾಗಿ ಬೆಂಗಳೂರಿನಲ್ಲಿ ಕಾಫಿ ಪ್ರೇಮಿಗಳ ಸಂಖ್ಯೆ ಹೆಚ್ಚಿನದಾಗಿದ್ದು, ಪ್ರತಿದಿನ 5-6 ಸಲ ಕಾಫಿ ಕುಡಿಯುವವರಿಗೂ ಈಗ ಈ ಬೆಲೆ ಏರಿಕೆ ‘ಕಾಫಿ ಶಾಕ್’ ಆಗಿದೆ. ಮಧ್ಯಮ ವರ್ಗದ ಜನರಿಗೆ ಇದು ಹೊಸ ಆರ್ಥಿಕ ಹೊರೆಯಾಗಿದ್ದು, ದೈನಂದಿನ ಖರ್ಚುಗಳ ಮೇಲೆ ಪರಿಣಾಮ ಬೀರುತ್ತಿದೆ.

ಮುಂದಿನ ತಿಂಗಳು ಮತ್ತೆ ಕಾಫಿ ಪುಡಿ ಬೆಲೆ 150 ರಿಂದ 200 ರೂಪಾಯಿವರೆಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಚಳಿಗಾಲದ ಬಿಸಿ ಕಾಫಿ ಸವಿಯಲು ಈಗ ಜನರು ಹೆಚ್ಚು ಹಣ ಖರ್ಚುಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

error: Content is protected !!