Monday, November 10, 2025

ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ದಾಳಿ: ಆಂಧ್ರ ಮೂಲದ ಆರೋಪಿಯ ಮೇಲೆ ಫೈರಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಬೊಮ್ಮಸಂದ್ರ ಸ್ಮಶಾನದ ಬಳಿ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ತಡರಾತ್ರಿ ನಡೆದಿದೆ. ಕಿಡ್ನಾಪ್ ಮತ್ತು ಇಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದ ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಎಂಬಾತನ ಮೇಲೆ ಹೆಬ್ಬಗೋಡಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ವರದಿಯ ಪ್ರಕಾರ, ಉದ್ಯಮಿ ಬಾಲಪ್ಪ ರೆಡ್ಡಿ ಹಾಗೂ ಮಾದೇಶ್ ಎಂಬವರ ಕೊಲೆ ಪ್ರಕರಣದಲ್ಲಿ ರವಿ ಪ್ರಸಾದ್ ರೆಡ್ಡಿ ಪ್ರಮುಖ ಆರೋಪಿ. ಅವನನ್ನು ಬಂಧಿಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳ ಮಹಜರಿಗಾಗಿ ಕರೆದೊಯ್ದಿದ್ದ ವೇಳೆ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಆರೋಪಿ ಏಕಾಏಕಿ ಹೆಡ್ ಕಾನ್ಸ್‌ಟೇಬಲ್ ಅಶೋಕ್ ಮೇಲೆ ದಾಳಿ ನಡೆಸಿದ್ದು, ಆತ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ.

ಪೊಲೀಸರು ಮೊದಲಿಗೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ, ಆರೋಪಿ ಹಿಂಜರಿಯದೆ ಮುಂದುವರಿದಿದ್ದಾನೆ. ಈ ಹಿನ್ನೆಲೆಯಲ್ಲಿ ಹೆಬ್ಬಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೋಮಶೇಖರ್ ತಕ್ಷಣ ಪ್ರತಿಕ್ರಿಯೆ ನೀಡಿ, ಆರೋಪಿ ರವಿ ಪ್ರಸಾದ್ ರೆಡ್ಡಿಯ ಕಾಲಿಗೆ ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ. ಬಳಿಕ ಗಾಯಗೊಂಡ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ.

error: Content is protected !!