ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ವ್ಯಾಪಾರಿಯೊಬ್ಬನ ವಿರುದ್ಧ ನಡೆಯುತ್ತಿದ್ದ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳು ನಗದಿನ ಬದಲಿಗೆ ಶೂಗಳನ್ನು ಲಂಚವಾಗಿ ಪಡೆದಿರುವ ಘಟನೆ ಭ್ರಷ್ಟಾಚಾರದ ಹೊಸ ಮಾದರಿಯಾಗಿದೆ. ವ್ಯಾಪಾರಿಯ ಹೆಸರು ಪ್ರಕರಣದ ಆರೋಪಿಗಳ ಪಟ್ಟಿಯಿಂದ ತೆಗೆದು ಹಾಕಲು ಪೊಲೀಸರೇ ಈ ವಿಚಿತ್ರ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ, ವ್ಯಾಪಾರಿಯ ಹೇಳಿಕೆಯನ್ನು ದಾಖಲಿಸಿದ ನಂತರ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗಿತ್ತು. ಆದರೆ ವರದಿ ವ್ಯಾಪಾರಿಯ ಪರವಾಗಿ ಬರೆಯಬೇಕಾದರೆ ಲಂಚ ಕೊಡಬೇಕೆಂದು ಪೊಲೀಸರು ಒತ್ತಾಯಿಸಿದರು. ನಗದು ನೀಡಲು ವ್ಯಾಪಾರಿಯು ನಿರಾಕರಿಸಿದಾಗ, “ನಾಲ್ಕು ಜೊತೆ ಶೂಗಳನ್ನು ಕೊಡಿ” ಎಂದು ಕೇಳಿದ್ದರು. ನಿರಾಶೆಯಿಂದ ವ್ಯಾಪಾರಿಯು ಅವರ ಬೇಡಿಕೆಗೆ ಒಪ್ಪಿಕೊಂಡು ಶೂಗಳನ್ನು ನೀಡಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ಬಗ್ಗೆ ವ್ಯಾಪಾರಿಯು ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಿದ ನಂತರ ಇಲಾಖೆ ತಕ್ಷಣ ಕ್ರಮ ಕೈಗೊಂಡಿದ್ದು, ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

