Sunday, November 9, 2025

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಬಿತ್ತು ಬರೋಬ್ಬರಿ 21 ಲಕ್ಷ ರೂ. ದಂಡ: ಸ್ಕೂಟರ್‌ ಸವಾರ ಫುಲ್ ಶಾಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನದಲ್ಲಿ ವಾಹನ ನಿಯಮ ಉಲ್ಲಂಘಿಸುವವರಿಗೆ ದಂಡವನ್ನು ವಿಧಿಸಲಾಗುತ್ತದೆ‌. ಕೆಲವೊಮ್ಮೆ ಈ ದಂಡದ ಮೊತ್ತ ವಿಪರೀತವಾಗಿ ಆಗಾಗ ಅಚ್ಚರಿಯ ವಿಚಾರಗಳು ಮುನ್ನಲೆಗೆ ಬರುತ್ತಿರುತ್ತದೆ.

ಇಲ್ಲಿ ಓರ್ವ ಸ್ಕೂಟರ್ ಸವಾರನೊಬ್ಬನಿಗೆ ಹೆಲ್ಮೆಟ್ ಧರಿಸದ ಕಾರಣ ಬರೋಬ್ಬರಿ 21 ಲಕ್ಷ ರೂ. ನಷ್ಟು ದಂಡ ವಿಧಿಸಿದ್ದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ.

ಸಾಮಾನ್ಯವಾಗಿ ಹೆಲ್ಮೆಟ್ ಧರಿಸದಿದ್ದರೆ ಒಂದೆರೆಡು ಸಾವಿರ ಫೈನ್ ಹಾಕಿದ್ದು ಕೇಳಿದ್ದೇವೆ. ಆದರೆ 21 ಲಕ್ಷ ರೂ. ಫೈನ್ ಹಾಕಿದ್ದು ಮಾತ್ರ ವಿಚಿತ್ರವೆನಿಸುವಂತಿದೆ. ಆತನ ಸ್ಕೂಟರ್‌ಕ್ಕಿಂತಲೂ ದಂಡದ ಮೊತ್ತ ಹಲವು ಪಟ್ಟು ಅಧಿಕವಾಗಿದೆ.ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಮುಜಫರ್ ನಗರದ ನಿವಾಸಿಯೊಬ್ಬರು ಕೆಲಸ ನಿಮಿತ್ತ ತಮ್ಮ ಸ್ಕೂಟರ್‌ನಲ್ಲಿ ಅಗತ್ಯ ದಾಖಲೆಗಳಿಲ್ಲದೆ ಸಂಚರಿಸಿದ್ದಾರೆ. ಜತೆಗೆ ಹೆಲ್ಮೆಟ್ ಅನ್ನು ಕೂಡ ಅವರು ಧರಿಸರಲಿಲ್ಲ. ಇದೇ ವೇಳೆ ನ್ಯೂ ಮಂಡಿ ಪ್ರದೇಶದಲ್ಲಿ ಸಂಚಾರಿ ಪೊಲೀಸರ ತಪಾಸಣೆಯನ್ನು ಮಾಡುತ್ತಿದ್ದಾಗ ಆತ ಸಿಕ್ಕಿ ಹಾಕಿಕೊಂಡಿದ್ದಾನೆ.

ಸ್ಕೂಟರ್ ಸವಾರ ಸಂಚಾರ ನಿಯಮ ಉಲ್ಲಂಘಿಸಿದ್ದ ಕಾರಣ ಪೊಲೀಸರು ದಂಡವಿಧಿಸಿದ್ದಾರೆ. ಆದರೆ ದಂಡದ ಮೊತ್ತವು 20,74,000 ರೂ. ಆಗಿದ್ದು ಚಲನ್ ಫೋಟೊ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸ್ಕೂಟರ್ ಸವಾರನ ಆಪ್ತರೊಬ್ಬರು ಈ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಬಗ್ಗೆ ಪರಿಶೀಲನೆ ನಡೆಸಿ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.

ಮುಜಫರ್‌ನಗರದ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಚೌಬೆ ಬಗ್ಗೆ ಸ್ಪಷ್ಟನೆ ನೀಡಿ ಮಾತನಾಡಿ, ಚಲನ್ ನೀಡಿದ ಸಬ್ ಇನ್ಸ್‌ಪೆಕ್ಟರ್ ಮಾಡಿದ ತಪ್ಪಿನಿಂದಾಗಿ ಈ ದೋಷ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 207ರ ಅನ್ವಯ ದಂಡ ವಿಧಿಸಬೇಕಿತ್ತು. ಆದರೆ ಸಬ್-ಇನ್ಸ್‌ಪೆಕ್ಟರ್ 207ರ ನಂತರ ‘ಎಂವಿ ಕಾಯ್ದೆ’ ಎಂದು ನಮೂದಿಸಲು ಮರೆತಿದ್ದಾರೆ ಇದರಿಂದಾಗಿ 207 ಮತ್ತು ಈ ವಿಭಾಗದ ಅಡಿಯಲ್ಲಿ ಕನಿಷ್ಠ ದಂಡದ ಮೊತ್ತವಾದ 4,000 ರೂ. ಒಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ದಂಡದ ಮೊತ್ತ 20,74,000 ರೂ. ಎಂದು ಚಲನ್ ನಲ್ಲಿ ತಪ್ಪಾಗಿ ಬಂದಿದೆ. ಆದರೆ ನಿಜವಾಗಿ ಆತನಿಗೆ 4,000 ರೂ. ದಂಡವನ್ನು ಮಾತ್ರ ಪಾವತಿಸ ಬೇಕಾಗುತ್ತದೆ ಎಂದು ಎಸ್‌.ಪಿ. ಚೌಬೆ ಹೇಳಿದರು.

error: Content is protected !!