ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದಲ್ಲಿ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದಾರೆ. ಗಗನದಲ್ಲಿ ಹಾರಾಟದ ಮಧ್ಯೆಯೇ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ಘಟನೆಯ ಸಂಪೂರ್ಣ ದೃಶ್ಯವನ್ನು ಒಳಗೊಂಡಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೀಡಿಯೊದಲ್ಲಿ ಹೆಲಿಕಾಪ್ಟರ್ ಮರಳಿನ ಪ್ರದೇಶದಿಂದ ಹಾರಲು ಯತ್ನಿಸುತ್ತಿರುವುದು, ನಂತರ ನೀರಿನ ಮೇಲ್ಮೈಯಲ್ಲಿ ಅಲೆಗಳ ನಡುವೆ ತೂಗಾಡುತ್ತಿರುವುದು ಕಾಣಿಸುತ್ತದೆ. ಕೆಲವು ಕ್ಷಣಗಳ ಬಳಿಕ ಹೆಲಿಕಾಪ್ಟರ್‌ನ ಹಿಂದಿನ ರೆಕ್ಕೆ ಮುರಿದುಹೋಗಿ, ಪೈಲಟ್ ನಿಯಂತ್ರಣ ಕಳೆದುಕೊಳ್ಳುತ್ತಾರೆ. ತಕ್ಷಣವೇ ಯಂತ್ರಕ್ಕೆ ಬೆಂಕಿ ಹೊತ್ತಿಕೊಂಡು, ಅದು ತೀವ್ರವಾಗಿ ಓರೆಯಾಗಿ ಕ್ಯಾಸ್ಪಿಯನ್ ಸಮುದ್ರದ ತೀರದ ಬಳಿ ಪತನಗೊಳ್ಳುತ್ತದೆ.
ಹೆಲಿಕಾಪ್ಟರ್ ಕಿಜ್ಲ್ಯಾರ್‌ನಿಂದ ಇಜ್ಬರ್‌ಬಾಶ್‌ಗೆ ತೆರಳುತ್ತಿದ್ದ ವೇಳೆ ಆಕಾಶದಲ್ಲೇ ಬೆಂಕಿ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶಕ್ಕೆ ಪೈಲಟ್ ಪ್ರಯತ್ನಿಸಿದರೂ ವಿಫಲರಾದರು. ಕೊನೆಗೆ ಅದು ಕರಬುಡಖ್ಖೆಂಟ್ ಜಿಲ್ಲೆಯ ಒಂದು ಮನೆಯ ಅಂಗಳದಲ್ಲಿ ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದವರು ರಕ್ಷಣಾ ಸಂಬಂಧಿತ ವಿಮಾನಯಾನ ಕಂಪನಿಯ ಹಿರಿಯ ಅಧಿಕಾರಿಗಳು. ಮೃತರಲ್ಲಿ ಕೆಇಎಂಝಡ್ ಸಂಸ್ಥೆಯ ಉಪ ಪ್ರಧಾನ ನಿರ್ದೇಶಕರು, ಮುಖ್ಯ ಎಂಜಿನಿಯರ್, ಮುಖ್ಯ ವಿನ್ಯಾಸಕರು ಮತ್ತು ಹಾರಾಟ ಮೆಕ್ಯಾನಿಕ್ ಸೇರಿದ್ದಾರೆ. ಬೆಂಕಿ ಸುಮಾರು 80 ಚದರ ಮೀಟರ್ ಪ್ರದೇಶಕ್ಕೆ ಹರಡಿದ್ದು, ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

