ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಮಿನಿ ಹರಾಜು ಮುನ್ನವೇ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ಎದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳ ನಡುವೆ ಸಂಜು ಸ್ಯಾಮ್ಸನ್ ಟ್ರೇಡ್ ಕುರಿತ ಸ್ವಾಪ್ ಡೀಲ್ ಕುರಿತು ಮಾತುಕತೆ ನಡೆಯುತ್ತಿದ್ದು, ಇದು ಇದೀಗ ಅಭಿಮಾನಿಗಳಲ್ಲೂ ಕುತೂಹಲ ಹುಟ್ಟಿಸಿದೆ. ಈ ಒಪ್ಪಂದ ಯಶಸ್ವಿಯಾದರೆ, ಸ್ಯಾಮ್ಸನ್ ಮೊದಲ ಬಾರಿಗೆ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಮಾಹಿತಿಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಪಡೆದುಕೊಳ್ಳಲು ಇಬ್ಬರು ಪ್ರಮುಖ ಆಟಗಾರರನ್ನು ಬಿಟ್ಟುಕೊಡಲು ಸಿದ್ಧವಾಗಿದೆ. ಈ ಪೈಕಿ ರವೀಂದ್ರ ಜಡೇಜಾ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ವಿನಿಮಯದ ಭಾಗವಾಗಿ ನೀಡಲು ಸಿಎಸ್‌ಕೆ ನಿರ್ಧರಿಸಿದೆ ಎನ್ನಲಾಗಿದೆ.
ಇನ್ನು ರಾಜಸ್ಥಾನ್ ರಾಯಲ್ಸ್ ಪ್ರಾರಂಭದಲ್ಲಿ ರವೀಂದ್ರ ಜಡೇಜಾ ಜೊತೆಗೆ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರನ್ನು ನೀಡುವಂತೆ ಕೇಳಿಕೊಂಡಿದ್ದರೂ, ಸಿಎಸ್‌ಕೆ ತಮ್ಮ ನಿಲುವು ಬದಲಿಸದೆ ಬ್ರೆವಿಸ್ ಬದಲಿಗೆ ಸ್ಯಾಮ್ ಕರನ್ ಅವರನ್ನು ಟ್ರೇಡ್ ಮಾಡಲು ಸಮ್ಮತಿಸಿದೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಈ ಪ್ರಸ್ತಾಪದ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರೆಂದು ವರದಿಯಾಗಿದೆ. ಹೀಗಾಗಿ ಈ ಸ್ವಾಪ್ ಡೀಲ್ ಮುಂದಿನ ಕೆಲವು ವಾರಗಳಲ್ಲಿ ಅಧಿಕೃತವಾಗುವ ಸಾಧ್ಯತೆ ಇದೆ. ಆದಾಗ್ಯೂ, ಐಪಿಎಲ್ ಟ್ರೇಡ್ ನಿಯಮಗಳ ಪ್ರಕಾರ, ಇಂತಹ ವಿನಿಮಯಕ್ಕೆ ಆಟಗಾರರ ವೈಯಕ್ತಿಕ ಒಪ್ಪಿಗೆ ಅತ್ಯಂತ ಅಗತ್ಯ. ಈ ಹಿನ್ನೆಲೆಯಲ್ಲಿ ಸಿಎಸ್‌ಕೆ ಈಗ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರಿಂದ ಲಿಖಿತ ಒಪ್ಪಿಗೆಯನ್ನು ಎದುರು ನೋಡುತ್ತಿದೆ.
ಇಬ್ಬರೂ ಆಟಗಾರರು ತಮ್ಮ ಒಪ್ಪಿಗೆ ನೀಡಿದರೆ, ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಿ ತಮ್ಮ ತಂಡದ ಭಾಗವನ್ನಾಗಿ ಮಾಡಿಕೊಳ್ಳಲಿದೆ. ಸ್ಯಾಮ್ಸನ್‌ನಂತಹ ಶಾಂತ, ತಂತ್ರಜ್ಞ ನಾಯಕನನ್ನು ಪಡೆದುಕೊಳ್ಳುವುದು ಸಿಎಸ್‌ಕೆಗೆ ದೊಡ್ಡ ಬಲ ನೀಡಲಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

