ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂಗಳ ಖ್ಯಾತ ಪವಿತ್ರ ಧಾರ್ಮಿಕ ಯಾತ್ರಾತಾಣ ತಿರುಪತಿ ತಿರುಮಲ ದೇವಸ್ಥಾನದ ಸಿಬ್ಬಂದಿ ಪವಿತ್ರ ಬೆಟ್ಟಗಳ ಮೇಲೆ ಮಾಂಸಾಹಾರ ಸೇವಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ತಿರುಮಲದ ಅಲಿಪಿರಿ ಕಾಲುದಾರಿ ಸಮೀಪ ಮಾಂಸಾಹಾರ ಸೇವಿಸಿದ ಆರೋಪದ ಮೇಲೆ ಇಬ್ಬರು ಹೊರಗುತ್ತಿಗೆ ನೌಕರರನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವಜಾಗೊಳಿಸಿದೆ. ಮಾತ್ರವಲ್ಲದೇ ಈ ಸಂಬಂಧ ತಿರುಮಲದ ಎರಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಅಲಿಪಿರಿಯಿಂದ ತಿರುಮಲಕ್ಕೆ ಹೋಗುವ ಕಾಲುದಾರಿ ಬಳಿ ಮಾಂಸಾಹಾರ ಆಹಾರ ಸೇವಿಸಿದ ಇಬ್ಬರು ಹೊರಗುತ್ತಿಗೆ ನೌಕರರಾದ ರಾಮಸ್ವಾಮಿ ಮತ್ತು ಸರಸಮ್ಮ ಎಂಬುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಟಿಟಿಡಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಆಂದ್ರಪ್ರದೇಶ ದಾನ ಮತ್ತು ದತ್ತಿ ಕಾಯ್ದೆಯ ಸೆಕ್ಷನ್ 114ರ ಅಡಿಯಲ್ಲಿ ಹೊರಗುತ್ತಿಗೆ ನೈರ್ಮಲ್ಯ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

