ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಡೇವಿಡ್ ವಾರ್ನರ್ ನಿವೃತ್ತಿಯಾದ ಬಳಿಕ ಆರಂಭಿಕ ಸ್ಥಾನಕ್ಕೆ ಸರಿಯಾದ ಬದಲಿಯನ್ನು ಹುಡುಕುವ ತಲೆನೋವು ಇನ್ನೂ ಮುಂದುವರಿಯುತ್ತಿದೆ. ವಾರ್ನರ್ ತೆರಳಿದ ಬಳಿಕ ಸ್ಟೀವ್ ಸ್ಮಿತ್ ಅವರನ್ನು ಓಪನರ್ ಆಗಿ ಕಣಕ್ಕಿಳಿಸಿದರೂ ಪ್ರಯೋಗ ವಿಫಲವಾಯಿತು. ಬಳಿಕ ನಾಥನ್ ಮೆಕ್ಸ್ವೀನಿ ಮತ್ತು ಸ್ಯಾಮ್ ಕೊನ್ಸ್ಟಾಸ್ರನ್ನು ಪರೀಕ್ಷಿಸಿದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಈಗ ಆಸೀಸ್ ತಂಡ ಹೊಸ ಮುಖವಾದ ಜೇಕ್ ವೆದರಾಲ್ಡ್ ಅವರತ್ತ ದೃಷ್ಟಿ ಹರಿಸಿದೆ.
31 ವರ್ಷದ ವೆದರಾಲ್ಡ್, ಆಸ್ಟ್ರೇಲಿಯಾ ದೇಶೀಯ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಹಿನ್ನೆಲೆ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಸ್ಥಾನ ದೊರಕಿದೆ. ಅವರು ಪರ್ತ್ನಲ್ಲಿ ನಡೆಯಲಿರುವ ಮೊದಲ ಆ್ಯಶಸ್ ಟೆಸ್ಟ್ನಲ್ಲಿ ಉಸ್ಮಾನ್ ಖ್ವಾಜಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಬಹಳ ಹೆಚ್ಚು ಎಂದು ತಂಡದ ಮೂಲಗಳು ತಿಳಿಸಿವೆ.
ವೆದರಾಲ್ಡ್ ಈ ಪಂದ್ಯದಲ್ಲಿ ಮಿಂಚಿದರೆ, ಉಳಿದ ನಾಲ್ಕು ಪಂದ್ಯಗಳಿಗೂ ಅವರನ್ನು ಮುಂದುವರೆಸುವ ಯೋಜನೆ ಇದೆ. ಆದರೆ ವೈಫಲ್ಯ ಕಂಡರೆ ಆಸೀಸ್ ಆರಂಭಿಕ ಜೋಡಿಯ ಹುಡುಕಾಟ ಇನ್ನೂ ಮುಂದುವರಿಯುವುದು ಖಚಿತ. ವಾರ್ನರ್ನ ಖಾಲಿ ಸ್ಥಾನವನ್ನು ಪೂರೈಸುವ ಒತ್ತಡದ ನಡುವೆ ವೆದರಾಲ್ಡ್ಗೀಗ ಇದು ಅತ್ಯಂತ ಪ್ರಮುಖ ಅವಕಾಶವಾಗಿದೆ.

