ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಭೀಕರ ದಾಳಿ ನಡೆಸಲು ಉಗ್ರರು ನಡೆಸಿದ್ದ ಸಂಚು ಇದೀಗ ಬಯಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರುಕಾರ್ಯಾಚರಣೆಯೊಂದರಲ್ಲಿ 7 ಉಗ್ರರ ಹೆಡೆಮುರಿ ಕಟ್ಟಿದ್ದಾರೆ. ಬರೋಬ್ಬರಿ 300 ಕೆಜಿ ಆರ್‌ಡಿಎಕ್ಸ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಎರಡು ದಿನಗಳ ಹಿಂದೆಯಷ್ಟೇ ಉಗ್ರರ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಅರೆಸ್ಟ್ ಆಗಿರುವ ಕಾಶ್ಮೀರಿ ಮೂಲದ ವೈದ್ಯನನ್ನು ಅರೆಸ್ಟ್ ಮಾಡಿರುವ ಬೆನ್ನಲ್ಲೇ ಈ ಮಹತ್ವದ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿ ಮತ್ತೊರ್ವ ವೈದ್ಯ ಕೂಡ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಉತ್ತರ ಪ್ರದೇಶದ ಸಹರಾನ್‌ಪುರದಿಂದ ಕಾಶ್ಮೀರಿ ವೈದ್ಯ ಡಾ. ಅದೀಲ್ ಅಹ್ಮದ್ ರಾಥರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆತನ ಲಾಕರ್‌ನಿಂದ ಒಂದು ಎಕೆ-47 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಬಂಧಿತ ವೈದ್ಯ ನೀಡಿದ ಮಾಹಿತಿಯನ್ನಾಧರಿಸಿ ದೆಹಲಿಯ ಸಮೀಪದಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ತಯಾರಿಸುವ ಸಾಮಗ್ರಿಯುಳ್ಳ 2,900 ಕೆ.ಜಿ ಸ್ಫೋಟಕಗಳು, ರೈಫಲ್ (Rifle) ಹಾಗೂ ಭಾರೀ ಪ್ರಮಾಣದ ಮದ್ದುಗುಂಡುಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಅ.27ರಂದು ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನ ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿದ್ದವು. ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ವೈದ್ಯ ಆದಿಲ್ ಅಹ್ಮದ್ ರಾಥರ್ ಪೋಸ್ಟರ್ ಅಂಟಿಸುತ್ತಿರುವುದು ಬೆಳಕಿಗೆ ಬಂದಿತ್ತು. ಅದರಂತೆ ಶ್ರೀನಗರ ಪೊಲೀಸರು ಯುಎಪಿಎ ಕಾಯ್ದೆಯ (ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ) ಸೆಕ್ಷನ್ 13,16, 17, 18, 18-ಬಿ, 19, 20, 23, 39 &40, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 61 (2), 147, 148, 152, 351(2) ಹಾಗೂ ಸ್ಫೋಟಕ ವಸ್ತು ಕಾಯ್ದೆ ಸೆಕ್ಷನ್ 4/5 ಮತ್ತು ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ಸೆಕ್ಷನ್ 7/25/27 ಅಡಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿತ್ತು. ಇದರ ಬೆನಲ್ಲೇ ಇಬ್ಬರು ವೈದ್ಯರು ಸೇರಿದಂತೆ 7 ಉಗ್ರರನ್ನು ಬಂಧಿಸಿದ್ದು, ʻವೈಟ್ ಕಾಲರ್ ಭಯೋತ್ಪಾದಕ ಜಾಲʼವನ್ನ ಬಯಲಿಗೆಳೆಯಲಾಗಿದೆ. ಅನೇಕ ವೃತ್ತಿಪರರು ಹಾಗೂ ವಿದ್ಯಾರ್ಥಿಗಳೂ ಇದರಲ್ಲಿ ಸಕ್ರಿಯವಾಗಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಜೆ&ಕೆ ಪೊಲೀಸರು ಹೇಳುವಂತೆ, ವೈಟ್ ಕಾಲರ್ ಉಗ್ರರ ಜಾಲದಲ್ಲಿ ವಿದ್ಯಾರ್ಥಿಗಳು, ವೃತ್ತಿಪರರು ಸಕ್ರಿಯರಾಗಿದ್ದು, ಭಯೋತ್ಪಾದಕರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಅಲ್ಲದೇ ನಿರ್ದಿಷ್ಟ ವ್ಯಕ್ತಿಗಳನ್ನ ಗುರುತಿಸುವ ಮೂಲಕ ಮೂಲಭೂತವಾದವನ್ನ ಪ್ರಚೋದಿಸುತ್ತಿದ್ದರು. ಬಳಿಕ ಅವರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುತ್ತಿದ್ದರು. ಜೊತೆಗೆ ಲಾಜಿಸ್ಟಿಕ್ಸ್ ಗಾಗಿ ಎನ್‌ಕ್ರಿಪ್ಟ್ (ಡೇಟಾವನ್ನ ಸೀಕ್ರೆಟ್ ಆಗಿ ಓದಲು ಬಳಸುವ ವಿಧಾನ) ಮಾಡಿದ ಚಾನೆಲ್‌ಗಳನ್ನ ಬಳಸುತ್ತಿದ್ದರು. ಸಾಮಾಜಿಕ ಹಾಗೂ ದತ್ತಿ ಸಂಸ್ಥೆಗಳ ಸೋಗಿನಲ್ಲಿ ವೃತ್ತಿಪರರು, ಶೈಕ್ಷಣಿಕ ನಿಧಿಗಳಿಂದ ಹಣ ಸಂಗ್ರಹಿಸುತ್ತಿದ್ದರು. ಬಳಿಕ ರಹಸ್ಯ ಮಾರ್ಗಗಳ ಮೂಲಕ ಕೃತ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನ ಸಂಗ್ರಹಿಸುತ್ತಿದ್ದರು. ಐಇಡಿಗಳನ್ನು ತಯಾರಿಸಲು ಅಗತ್ಯ ಸಾಮಗ್ರಿಗಳನ್ನೂ ಸಂಗ್ರಹಿಸುವಲ್ಲಿ ನಿರತರಾಗುತ್ತಿದ್ದರು ಎಂದು ಪೊಲೀಸರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2,900 ಕೆಜಿ ಸ್ಫೋಟಕ ಸಾಧನಗಳು ಜಪ್ತಿ
ತನಿಖೆ ವೇಳೆ ಶ್ರೀನಗರ, ಅನಂತನಾಗ್, ಗಂಡರ್ಬಾಲ್ ಮತ್ತು ಶೋಪಿಯಾನ್‌ಗಳಲ್ಲಿ ತೀವ್ರ ಶೋಧ ನಡೆಸಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ವೈದ್ಯ ಸೇರಿ 7 ಉಗ್ರರರನ್ನ ಬಂಧಿಸಿದ್ದಾರೆ. ಹರಿಯಾಣ ಪೊಲೀಸರೊಂದಿಗೆ ಫರಿದಾಬಾದ್‌ನಲ್ಲಿ ಮತ್ತು ಉತ್ತರ ಪ್ರದೇಶದ ಸಹರಾನ್‌ಪುರದಲ್ಲೂ ಯುಪಿ ಪೊಲೀಸರೊಂದಿಗೆ ಶೋಧ ನಡೆಸಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕಾಶ್ಮೀರಿ ಮೂಲದ ವೈದ್ಯ ಆದಿಲ್ ಅಹ್ಮದ್ ರಾಥರ್‌ನನ್ನು ಪೊಲೀಸರು ಬಂಧಿಸಿದ್ದರು. ಆತ ನೀಡಿದ ಮಾಹಿತಿಯನ್ನಾಧರಿಸಿ ಹಲವು ಅಪರಾಧ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳು, ಶಸ್ತ್ರಾಸ್ತ್ರಗಳು/ಮದ್ದುಗುಂಡುಗಳು ಮತ್ತು ಐಇಡಿ ತಯಾರಿಸುವ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಮದ್ದು ಗುಂಡುಗಳೊಂದಿಗೆ 1 ಚೈನೀಸ್ ಸ್ಟಾರ್ ಪಿಸ್ತೂಲ್, 1 ಬೆರೆಟ್ಟಾ ಪಿಸ್ತೂಲ್, 1 ಎಕೆ 57 ರೈಫೆಲ್, 1 ಎಕೆ ಕ್ರಿಂಕೋವ್ ರೈಫೆಲ್, ಸುಧಾರಿತ ಸ್ಫೋಟಕ ಸಾಧನ ತಯಾರಿಸುವ 2,900 ಕೆಜಿ ಸ್ಫೋಟಕ ವಸ್ತುಗಳು, ರಾಸಾಯನಿಕ ಹಾಗೂ ದಹಿಸುವ ವಸ್ತುಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳು, ಬ್ಯಾಟರಿಗಳು, ತಂತಿಗಳು, ರಿಮೋಟ್ ಕಂಟ್ರೋಲ್, ಟೈಮರ್ ಹಾಗೂ ಲೋಹದ ವಸ್ತುಗಳನ್ನ ವಶಕ್ಕೆ ಜಪ್ತಿ ಮಾಡಲಾಗಿದೆ. ಇನ್ನೂ ನಿಧಿಗಳ ಮೂಲಕ ಹಣಕಾಸು ಸಂಗ್ರಹದ ಬಗ್ಗೆ ತನಿಖೆ ನಡೆಯುತ್ತಿದ್ದು, ಎಲ್ಲಾ ಸಂಪರ್ಕಗಳನ್ನು ತ್ವರಿತವಾಗಿ ಪತ್ತೆಹಚ್ಚುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

