ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ, ಉಪಮುಖ್ಯಮಂತ್ರಿಗಳೂ ಆದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ರಾಜ್ಯದಲ್ಲಿ ನಡೆದ “ಮತ ಕಳ್ಳತನ ವಿರುದ್ಧದ ಸಹಿ ಸಂಗ್ರಹ ಅಭಿಯಾನ”ವು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಅಭಿಯಾನದ ಮೂಲಕ ರಾಜ್ಯಾದ್ಯಂತ ಸಂಗ್ರಹಿಸಲಾದ 1,12,41,000 ಸಹಿಗಳ ದಾಖಲೆಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಘಟಕಕ್ಕೆ ಸಲ್ಲಿಸಲಾಗಿದೆ.
ಸಲ್ಲಿಕೆ ಪ್ರಕ್ರಿಯೆ:
ಸೋಮವಾರದಂದು, ಡಿಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಮುಖಂಡರ ನಿಯೋಗವು ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ, ಸಹಿ ಸಂಗ್ರಹ ದಾಖಲೆಗಳ ಒಂದು ಪೆಟ್ಟಿಗೆಯನ್ನು ಸಾಂಕೇತಿಕವಾಗಿ ಹಸ್ತಾಂತರಿಸಿತು. ಉಳಿದ ದಾಖಲೆಗಳ ಪೆಟ್ಟಿಗೆಗಳನ್ನು ನಂತರ ಎಐಸಿಸಿ ನೂತನ ಕಟ್ಟಡವಾದ ಇಂದಿರಾ ಭವನದಲ್ಲಿ, ಎಐಸಿಸಿ ಕಾರ್ಯದರ್ಶಿ ನೆಟ್ಟ ಡಿಸೋಜ ಅವರಿಗೆ ಹಸ್ತಾಂತರಿಸಲಾಯಿತು.
40 ಜಿಲ್ಲೆಗಳಲ್ಲಿ ಅಭಿಯಾನ:
ಕರ್ನಾಟಕ ಕಾಂಗ್ರೆಸ್‌ನ 40 ಜಿಲ್ಲಾ ಘಟಕಗಳಲ್ಲಿ ಈ ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಗಿತ್ತು. ರಾಜ್ಯದಲ್ಲಿ ಅತಿ ಹೆಚ್ಚು ಸಹಿ ಸಂಗ್ರಹಿಸಿದ ಜಿಲ್ಲಾಧ್ಯಕ್ಷರುಗಳು ಕೂಡ ಡಿಕೆ ಶಿವಕುಮಾರ್ ಅವರೊಂದಿಗೆ ದೆಹಲಿಗೆ ತೆರಳಿ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಡಿಕೆಶಿ ಹೇಳಿದ್ದೇನು?:
ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ವೋಟ್ ಚೋರಿ”ಯ ಕುರಿತು ಹೈಕಮಾಂಡ್ ನಾಯಕರಿಗೆ ವಿವರಣೆ ನೀಡಿದರು. “ನಾವು ಕೂಡ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದೇವೆ, ರಾಜರಾಜೇಶ್ವರಿ ನಗರದಲ್ಲಿ ಒಂದು ಸಮುದಾಯದ ವೋಟ್ ಅನ್ನು ಶಿಫ್ಟ್ ಮಾಡಲಾಗಿದೆ. ಚಿಲುಮೆ ಹಗರಣ ಕರ್ನಾಟಕದಲ್ಲಿ ಹೇಗೆ ಆಯಿತು, ಸಂಸತ್ ಚುನಾವಣೆಯಲ್ಲಿ ಹೇಗೆ ಆಯಿತು ಎಂಬುದನ್ನು ನಾವು ನೋಡಿದ್ದೇವೆ. ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಾವು ಸಹಿ ಸಂಗ್ರಹ ಅಭಿಯಾನ ಮಾಡಿದ್ದೇವೆ,” ಎಂದು ತಿಳಿಸಿದರು.
ಅಲ್ಲದೆ, ಈ ಅಭಿಯಾನವನ್ನು ಒಂದು ವಾರ ಅವಧಿಗೆ ವಿಸ್ತರಿಸಲಾಗಿದ್ದು, ‘ಒನ್ ಮ್ಯಾನ್ ಒನ್ ವೋಟ್’ ಇರಬೇಕು ಎಂದು ಕರೆ ನೀಡಿದರು.
ಬಿಹಾರದಲ್ಲಿ ರಾಹುಲ್ ಗಾಂಧಿ ಕೂಡ ‘ವೋಟ್ ಚೋರಿ’ ಅಭಿಯಾನ ನಡೆಸಿದ್ದಾರೆ ಎಂದು ಡಿಕೆಶಿ ಉಲ್ಲೇಖಿಸಿದರು. “ಒಳ್ಳೆಯ ದಿನಗಳು ದೇಶಕ್ಕೆ ಬರುತ್ತಿವೆ. ಈ ದೇಶದ ಸಂವಿಧಾನ, ರಾಷ್ಟ್ರಗೀತೆ, ಹಾಗೂ ನಮ್ಮ ಬಾವುಟದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ,” ಎಂದು ಅವರು ದೃಢಪಡಿಸಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಜಿ.ಸಿ. ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಸೊರಕೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

