ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಜೈಲು ಐಷಾರಾಮಿ ಸೌಲಭ್ಯಗಳ ‘ತಾಣ’ವಾಗಿ ಮಾರ್ಪಟ್ಟಿರುವ ಹಗರಣವು ಇದೀಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಕೈದಿಗಳ ‘ಹೈಫೈ ಲೈಫ್’ ಮತ್ತು ಡ್ಯಾನ್ಸ್ ವಿಡಿಯೋಗಳು ನಿತ್ಯವೂ ಬಹಿರಂಗಗೊಳ್ಳುತ್ತಿರುವ ಬೆನ್ನಲ್ಲೇ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಹೊಸ ಮುಖ್ಯ ಅಧೀಕ್ಷಕರ ನೇಮಕ:
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಸರ್ಕಾರವು ಪರಪ್ಪನ ಅಗ್ರಹಾರದ ಕೇಂದ್ರ ಜೈಲಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಂಶುಕುಮಾರ್ ಅವರನ್ನು ಹೊಸ ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿಯೊಬ್ಬರನ್ನು ಈ ಜಾಗಕ್ಕೆ ನೇಮಕ ಮಾಡುವುದಾಗಿ ಸರ್ಕಾರ ಈ ಹಿಂದೆ ತಿಳಿಸಿತ್ತು.
ಕೈದಿಗಳ ಮೋಜುಮಸ್ತಿಗೆ ಅಧಿಕಾರಿಗಳ ಎತ್ತಂಗಡಿ:
ಜೈಲಿನಲ್ಲಿ ನಡೆಯುತ್ತಿದ್ದ ನಿಯಮಬಾಹಿರ ಚಟುವಟಿಕೆಗಳು ಹಾಗೂ ಕೈದಿಗಳ ಡ್ಯಾನ್ಸ್ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಹಾಲಿ ಮುಖ್ಯ ಅಧೀಕ್ಷಕರಾಗಿದ್ದ ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಅಷ್ಟೇ ಅಲ್ಲದೆ, ಕರ್ತವ್ಯ ಲೋಪದ ಆರೋಪದ ಮೇಲೆ ಇಬ್ಬರು ಪ್ರಮುಖ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ.
ಗೃಹ ಸಚಿವರ ತರಾಟೆ, ಎಫ್‌ಐಆರ್ ದಾಖಲು:
ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋಗಳ ಕುರಿತು ಗಂಭೀರ ಚರ್ಚೆ ನಡೆಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಸೋಮವಾರದಂದು ಕಾರಾಗೃಹ ಇಲಾಖೆ ಎಡಿಜಿಪಿ ಬಿ. ದಯಾನಂದ್ ಅವರ ಅನುಪಸ್ಥಿತಿಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಸದ್ಯ ಜೈಲಿನಲ್ಲಿ ಮೋಜುಮಸ್ತಿ ಮಾಡಿದ ಕೈದಿಗಳ ಡ್ಯಾನ್ಸ್ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಎನ್‌ಸಿಆರ್ ಮತ್ತು ಒಂದು ಎಫ್‌ಐಆರ್ ದಾಖಲಾಗಿದೆ. ಸಜಾ ಕೈದಿ ಪ್ಯಾಟ್ರಿಕ್ ಮತ್ತು ಆತನ ತಂಡದ ವಿರುದ್ಧ ಕೇಸು ದಾಖಲಾಗಿದ್ದು, ಅಮಾನತುಗೊಳ್ಳುವ ಮುನ್ನ ಸೂಪರಿಂಟೆಂಡೆಂಟ್ ಇಮಾಮ್‌ಸಾಬ್ ಮ್ಯಾಗೇರಿ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ.

