ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಕೆಂಪು ಕೋಟೆ ಸಮೀಪ ಸಂಜೆ ಕಾರು ಸ್ಫೋಟಗೊಂಡು ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿದ್ದು,ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. ಸದ್ಯ ಎಲ್ಲೆಡೆ ಹೈಅಲರ್ಟ್ ಘೋಷಿಸಲಾಗಿದೆ.
ಈ ಭೀಕರ ಸ್ಫೋಟದ ನಂತರದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೆಂಪುಕೋಟೆ ಮುಂಭಾಗದ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಬಳಿಕ ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ 10ಕ್ಕೂ ಹೆಚ್ಚು ಕಾರುಗಳು ಧ್ವಂಸವಾಗಿದ್ದು, ಕೆಲವರ ದೇಹಗಳು ಛಿದ್ರ ಛಿದ್ರವಾಗಿರುವುದು ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿವೆ.ಇನ್ನು ಘಟನಾ ಸ್ಥಳಕ್ಕೆ ಎನ್‌ಐಎ, ಎನ್‌ಎಸ್‌ಜಿ ತಂಡಗಳು ತೆರಳಿ ಪರಿಶೀಲಿಸುತ್ತಿದ್ದು, ಘಟನೆ ಹಿಂದೆ ಉಗ್ರರ ಕೈವಾಡ ಇದೆಯೇ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿ ಮಾತನಾಡಿದ್ದು, ‘ನನ್ನ ಜೀವನದಲ್ಲಿ ಇಷ್ಟು ದೊಡ್ಡ ಸ್ಫೋಟವನ್ನು ನಾನು ಎಂದಿಗೂ ಕೇಳಿಲ್ಲ. ಇದರ ಪರಿಣಾಮದಿಂದ ನಾನು ಮೂರು ಬಾರಿ ಬಿದ್ದೆ. ನಾವೆಲ್ಲರೂ ಸಾಯುತ್ತೇವೆಯೇನೋ ಎಂಬಂತೆ ಭಾಸವಾಯಿತು’ ಎಂದು ಹೇಳಿದ್ದಾರೆ.
ನನ್ನ ಮನೆಯಿಂದ ಜ್ವಾಲೆಗಳನ್ನು ನೋಡಿದೆ ಮತ್ತು ನಂತರ ಏನಾಯಿತು ಎಂದು ನೋಡಲು ಕೆಳಗೆ ಇಳಿದೆ. ಜೋರಾದ ಸ್ಫೋಟ ಸಂಭವಿಸಿದೆ. ನಾನು ಹತ್ತಿರದಲ್ಲಿ ವಾಸಿಸುತ್ತಿದ್ದೇನೆ ಎಂದು ಸ್ಥಳೀಯ ನಿವಾಸಿ ಹೇಳಿದರು.

