ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ಈಗ ಚೇತರಿಸಿಕೊಂಡಿದ್ದಾರೆ.
ಅಕ್ಟೋಬರ್ 25 ರಂದು ನಡೆದ ಆ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ಅವರ ಶಾಟ್ ಹಿಡಿಯುವ ಪ್ರಯತ್ನದಲ್ಲಿ ಡೈವ್ ಮಾಡಿದಾಗ ಅಯ್ಯರ್ ಅವರ ಎಡ ಪಕ್ಕೆಲುಬುಗಳಿಗೆ ಪೆಟ್ಟಾಗಿತ್ತು. ಇದರ ಪರಿಣಾಮವಾಗಿ ಅವರ ಗುಲ್ಮ ಭಾಗದಲ್ಲಿ ಆಂತರಿಕ ರಕ್ತಸ್ರಾವ ಉಂಟಾಗಿ, ಅವರನ್ನು ತಕ್ಷಣ ಸಿಡ್ನಿಯ ಆಸ್ಪತ್ರೆಗೆ ದಾಖಲಿಸಿ ಇಂಟರ್ವೆನ್ಷನಲ್ ಟ್ರಾನ್ಸ್-ಕ್ಯಾತಿಟರ್ ಎಂಬೋಲೈಸೇಶನ್ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಈಗ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಸಿಡ್ನಿ ಬೀಚ್‌ನಲ್ಲಿ ವಿಶ್ರಾಂತಿಯಾಗಿರುವ ತಮ್ಮ ಫೋಟೋವನ್ನು ಹಂಚಿಕೊಂಡ ಶ್ರೇಯಸ್, “ಸೂರ್ಯನಿಂದ ಉತ್ತಮ ಥೆರಪಿ ಸಿಕ್ಕಿದೆ. ಮತ್ತೆ ಬಂದಿರುವುದಕ್ಕೆ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಸಂದೇಶದೊಂದಿಗೆ ಅಯ್ಯರ್ ಸಂಪೂರ್ಣ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಭಾರತಕ್ಕೆ ವಾಪಸಾಗಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಖುಷಿ ತಂದಿದೆ.

