ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಟರಿ ಅದೃಷ್ಟ ಯಾರಿಗೆ ಯಾವಾಗ ಸಿಗುತ್ತೆ ಎಂಬುದು ನಿಜಕ್ಕೂ ಕುತೂಹಲಕಾರಿ ಸಂಗತಿ. ಕೆಲವೊಮ್ಮೆ ಕೇವಲ ಕೆಲವು ರೂಪಾಯಿಗಳ ಟಿಕೆಟ್ ಜೀವನವನ್ನೇ ಬದಲಾಯಿಸುತ್ತದೆ. ಪಂಜಾಬ್‌ನ ಲುಧಿಯಾನಾದಲ್ಲಿ ಇಂತಹ ಅದೃಷ್ಟದ ಕಥೆ ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಪಂಜಾಬ್‌ನ ಓಂಕಾರ್ ಲಾಟರಿ ಅಂಗಡಿಯಲ್ಲಿ ವ್ಯಕ್ತಿಯೊಬ್ಬ ಕೇವಲ 2 ರೂಪಾಯಿಗೆ 7565 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದನು. ಆದರೆ ಆತನ ಹೆಸರು ಮತ್ತು ಫೋನ್ ನಂಬರ್ ರಹಸ್ಯವಾಗಿಯೇ ಉಳಿದಿದೆ. ಇದೀಗ ಆ ಟಿಕೆಟ್‌ಗೆ 1 ಕೋಟಿ ರೂಪಾಯಿಗಳ ಬಂಪರ್ ಬಹುಮಾನ ಬಿದ್ದಿದ್ದು, ಲಾಟರಿ ಅಂಗಡಿ ಮಾಲೀಕರು ಗೆದ್ದವನನ್ನು ಪತ್ತೆಹಚ್ಚಲು ಡೋಲು ಬಾರಿಸಿ ಹುಡುಕಾಟ ಆರಂಭಿಸಿದ್ದಾರೆ.
ನಗರದಲ್ಲೆಲ್ಲಾ 7565 ಸಂಖ್ಯೆಯನ್ನು ಘೋಷಿಸುತ್ತಾ, ಆ ಅದೃಷ್ಟವಂತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ವಿಚಿತ್ರ ಹುಡುಕಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಕುತೂಹಲ ಮೂಡಿಸಿದೆ. ಒಂದು ತಿಂಗಳೊಳಗೆ ವಿಜೇತನು ಬಹುಮಾನ ಕ್ಲೈಮ್ ಮಾಡದಿದ್ದರೆ ಲಾಟರಿ ರದ್ದಾಗಲಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

