Tuesday, November 11, 2025

ರಾಜ್ಯದಲ್ಲಿ ಹೈ ಅಲರ್ಟ್‌ಗೆ ಸಿಎಂ ಸೂಚನೆ: ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಕೆಂಪುಕೋಟೆ ಬಳಿ ನಡೆದ ಭೀಕರ ಸ್ಫೋಟದಲ್ಲಿ 9 ಜನರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಖುದ್ದು ಗೃಹ ಸಚಿವ ಅಮಿತ್ ಶಾ ಸ್ಥಳಕ್ಕೆ ಭೇಟಿ ನೀಡಿ, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಇತ್ತ ಬೆಂಗಳೂರಿನಲ್ಲಿಯೂ ಹೈ ಅಲರ್ಟ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ದೆಹಲಿ ಬ್ಲಾಸ್ಟ್ ಬೆನ್ನಲ್ಲೇ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದ್ದು, ಕರ್ನಾಟಕದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರವಹಿಸುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್, ಶಿವಾಜಿನಗರ, ಕೆ ಆರ್ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ.

ದೆಹಲಿಯಲ್ಲಿ ಸ್ಫೋಟವಾಗಿದೆ, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಲರ್ಟ್ ಘೋಷಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು-ಬೆಂಗಳೂರು ಪೊಲೀಸರ ಜೊತೆ ಮಾತಾಡ್ಡಿದ್ದೀನಿ. ಇಡೀ ರಾಜ್ಯದಲ್ಲಿ ಭದ್ರತೆ ಬಿಗಿಗೊಳಿಸುವ ಕೆಲಸ ಮಾಡುತ್ತೇವೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಗಳಲ್ಲಿ ಭದ್ರತೆ ಬಿಗಿ ಗೊಳಿಸಲು ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಎಲ್ಲೆಡೆ ಕಟ್ಟೆಚ್ಚರವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಆದೇಶಿಸಿದ್ದಾರೆ. ನಗರದಾದ್ಯಂತ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದು, ಹೋಟೆಲ್, ಲಾಡ್ಜ್, ಪಿಜಿಗಳ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಗಣ್ಯ ವ್ಯಕ್ತಿಗಳ ಮನೆ, ಕಚೇರಿ, ರಾಯಭಾರಿ ಕಚೇರಿಗಳ ಬಳಿ ಭದ್ರತೆ ಒದಗಿಸಲಾಗಿದ್ದು, ಅನುಮಾನಾಸ್ಪದ ಕಾರುಗಳು, ವಾಹನಗಳ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಸ್ಟೇಷನ್, ಮೆಟ್ರೋ, ಶಾಪಿಂಗ್ ಕಾಂಪ್ಲೆಕ್ಸ್, ಜನನಿಬಿಡ ಪ್ರದೇಶಗಳ ಪರಿಶೀಲನೆಗೆ ಸೂಚನೆ ನೀಡಿದರು.

error: Content is protected !!