ಶಿಕ್ಷಣ ಅಂದ್ರೆ ಕೇವಲ ಪುಸ್ತಕದ ಜ್ಞಾನವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ. ರಾಷ್ಟ್ರದ ಪ್ರಗತಿಗೆ, ಸಾಮಾಜಿಕ ಬದಲಾವಣೆಗೆ, ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಶಿಕ್ಷಣವೇ ಮೂಲಭೂತ ಆಧಾರ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿವರ್ಷ ನವೆಂಬರ್ 11ರಂದು “ರಾಷ್ಟ್ರೀಯ ಶಿಕ್ಷಣ ದಿನ”ವನ್ನು ಆಚರಿಸಲಾಗುತ್ತದೆ. ಈ ದಿನವು ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಗೌರವಾರ್ಥವಾಗಿ ಆಚರಿಸಲ್ಪಡುತ್ತದೆ.
ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಸ್ವಾತಂತ್ರ್ಯ ಹೋರಾಟದ ಹೀರೋ ಮಾತ್ರವಲ್ಲ, ಭಾರತೀಯ ಶಿಕ್ಷಣ ವ್ಯವಸ್ಥೆಯ ದೃಷ್ಟಿದಾನಿಯಾಗಿದ್ದರು. ಅವರು ಶಿಕ್ಷಣವನ್ನು ಪ್ರತಿಯೊಬ್ಬರ ಹಕ್ಕು ಎಂದು ಪರಿಗಣಿಸಿದರು ಮತ್ತು ಸ್ವತಂತ್ರ ಭಾರತದ ಶಿಕ್ಷಣದ ಬುನಾದಿ ಹಾಕಿದವರಲ್ಲಿ ಒಬ್ಬರಾಗಿದ್ದರು. ಅವರ ಪ್ರಯತ್ನದಿಂದಲೇ ವಿಶ್ವವಿದ್ಯಾಲಯ ಅನುದಾನ ಆಯೋಗ (UGC), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IITs) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗಳಂತಹ ಪ್ರಮುಖ ಸಂಸ್ಥೆಗಳು ಸ್ಥಾಪನೆಯಾದವು.
ಈ ದಿನವನ್ನು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜ್ಞಾನೋತ್ಸವದಂತೆಯೇ ಆಚರಿಸಲಾಗುತ್ತದೆ. ಉಪನ್ಯಾಸಗಳು, ಚರ್ಚೆಗಳು ಮತ್ತು ಶಿಕ್ಷಣದ ಮಹತ್ವ ಕುರಿತು ಕಾರ್ಯಾಗಾರಗಳು ನಡೆಯುತ್ತವೆ. ಇದರ ಉದ್ದೇಶ ಯುವ ಪೀಳಿಗೆಯಲ್ಲೂ ಶಿಕ್ಷಣದ ಪ್ರಾಮುಖ್ಯತೆ ಮತ್ತು ಮೌಲ್ಯಗಳ ಅರಿವು ಮೂಡಿಸುವುದು.
ಶಿಕ್ಷಣ ದಿನದ ಆಚರಣೆ ನಮಗೆ ಕೇವಲ ಪಾಠ ಪುಸ್ತಕದ ನೆನಪಲ್ಲ, ಅದು ಜ್ಞಾನವೇ ನಿಜವಾದ ಶಕ್ತಿ ಎಂಬ ಸಂದೇಶವನ್ನು ಸಾರುತ್ತದೆ. ರಾಷ್ಟ್ರದ ಅಭಿವೃದ್ಧಿ ಶಿಕ್ಷಣದ ಬೆಳಕಿನಲ್ಲಿ ಮಾತ್ರ ಸಾಧ್ಯವೆಂಬ ಸತ್ಯವನ್ನು ಈ ದಿನ ಮತ್ತೆ ನೆನಪಿಸುತ್ತದೆ.

