ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವಿತ್ರ ಗಂಗಾ ನದಿಯ ತೀರದಲ್ಲಿ ಶಾಂತ ವಾತಾವರಣದ ನಡುವೆ ನಡೆದ ಒಂದು ವಿಚಿತ್ರ ಘಟನೆ ಈಗ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಋಷಿಕೇಶದ ಲಕ್ಷ್ಮಣ್ ಝೂಲಾ ಬಳಿ ವಿದೇಶಿ ಮಹಿಳೆಯೊಬ್ಬರು ಬಿಕಿನಿ ಧರಿಸಿ ಗಂಗೆಯಲ್ಲಿ ಸ್ನಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಜನರ ನಡುವೆ ವಾದ–ವಿವಾದ ಹುಟ್ಟುಹಾಕಿದೆ. ಧಾರ್ಮಿಕ ಸ್ಥಳದಲ್ಲಿ ಈ ರೀತಿಯ ಉಡುಪು ಧರಿಸಿ ಈಜುವುದು ಸರಿಯೇ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿಬರುತ್ತಿದೆ.
ಗಂಗಾ ನದಿಯು ಹಿಂದು ಧರ್ಮದಲ್ಲಿ ಅತ್ಯಂತ ಪವಿತ್ರವಾಗಿದ್ದು, ಲಕ್ಷಾಂತರ ಜನರ ಭಕ್ತಿ ಮತ್ತು ನಂಬಿಕೆಯ ಕೇಂದ್ರವಾಗಿದೆ. ಇಂತಹ ಪವಿತ್ರ ಸ್ಥಳದಲ್ಲಿ ಬಿಕಿನಿ ಧರಿಸಿ ಸ್ನಾನ ಮಾಡಿರುವ ಮಹಿಳೆಯ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ನೆಟ್ಟಿಗರು, ವಿದೇಶಿ ಮಹಿಳೆಗೆ ಸ್ಥಳೀಯ ಸಂಸ್ಕೃತಿ ಹಾಗೂ ಆಚಾರ–ವಿಚಾರಗಳ ಅರಿವು ಇಲ್ಲದ ಕಾರಣದಿಂದ ಇದು ಸಂಭವಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಮತ್ತೊಂದು ವಲಯದವರು, ಆಕೆ ಯಾವುದೇ ಅವಮಾನ ಮಾಡುವ ಉದ್ದೇಶದಿಂದ ಅಲ್ಲ, ಬದಲಿಗೆ ಗಂಗಾ ನದಿಯ ಶುದ್ಧತೆಯನ್ನು ಅನುಭವಿಸಲು ಹೋಗಿದ್ದಾಳೆ ಎಂದು ಹೇಳಿದ್ದಾರೆ. ಸಂಸ್ಕೃತಿ ಮತ್ತು ನಂಬಿಕೆಗಳ ನಡುವಿನ ಗಡಿಯ ಕುರಿತು ಚರ್ಚೆ ಈಗ ತೀವ್ರಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ಹರಿದಾಡುತ್ತಿವೆ.

