Tuesday, November 11, 2025

ಪಾಕ್ ಜೊತೆ ಆಡೋದಕ್ಕೆ ಯಾರಿಗೂ ಇಷ್ಟ ಇಲ್ಲ ನೋಡಿ! ತ್ರಿಕೋನ ಸರಣಿಯಿಂದ ಹಿಂದೆ ಸರಿದ ಅಫ್ಘಾನಿಸ್ತಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಸ್ಪರ್ಧೆ ಈಗ ರಾಜಕೀಯ ಮತ್ತು ಮಾನವೀಯ ಘಟನೆಗಳ ನೆರಳಿನಲ್ಲಿ ಮುಳುಗಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ ಟಿ20 ತ್ರಿಕೋನ ಸರಣಿಯಿಂದ ಅಫ್ಘಾನಿಸ್ತಾನ್ ತಂಡವು ಅಧಿಕೃತವಾಗಿ ಹಿಂದೆ ಸರಿದಿದೆ. ನವೆಂಬರ್ 17ರಿಂದ ಆರಂಭವಾಗಬೇಕಿದ್ದ ಈ ಸರಣಿಯಲ್ಲಿ ಪಾಕಿಸ್ತಾನ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಪಾಲ್ಗೊಳ್ಳಬೇಕಾಗಿತ್ತು. ಆದರೆ ಪಾಕ್ ಸೇನೆಯು ಅಫ್ಘಾನಿಸ್ತಾನದ ಗಡಿಯಲ್ಲಿನ ಪಕ್ತಿಕಾ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯ ಪರಿಣಾಮ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಕ್ಟೋಬರ್ 17ರಂದು ಪಾಕಿಸ್ತಾನ ಗಡಿಯ ಸಮೀಪದ ಉರ್ಗುನ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟಿಗರು ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಮೃತಪಟ್ಟಿದ್ದರು. ಪಾಕ್ ಏರ್‌ಫೋರ್ಸ್ ನಡೆಸಿದ ಈ ದಾಳಿ ದೇಶಾದ್ಯಂತ ಆಕ್ರೋಶ ಹುಟ್ಟಿಸಿದರೆ, ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಅದನ್ನು ಗಂಭೀರವಾಗಿ ಪರಿಗಣಿಸಿ ಪಾಕ್ ವಿರುದ್ಧದ ಸರಣಿಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.

ಈ ಬೆಳವಣಿಗೆಯ ಹಿನ್ನೆಲೆ ಪಿಸಿಬಿ ತಕ್ಷಣ ಕ್ರಮ ಕೈಗೊಂಡು ಝಿಂಬಾಬ್ವೆ ತಂಡವನ್ನು ಸರಣಿಗೆ ಸೇರಿಸಿದೆ. ಹೀಗಾಗಿ ಈಗ ಪಾಕಿಸ್ತಾನ್, ಶ್ರೀಲಂಕಾ ಮತ್ತು ಝಿಂಬಾಬ್ವೆ ನಡುವೆ ನವೆಂಬರ್ 17ರಿಂದ 29ರವರೆಗೆ ತ್ರಿಕೋನ ಟಿ20 ಸರಣಿ ನಡೆಯಲಿದೆ. ಪಂದ್ಯಗಳು ರಾವಲ್ಪಿಂಡಿ ಮತ್ತು ಲಾಹೋರ್ ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನವೆಂಬರ್ 29ರಂದು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

error: Content is protected !!