Tuesday, November 11, 2025

ಅಕ್ರಮ ಅದಿರು ಸಾಗಣೆ, ಮಾರಾಟ ಕೇಸ್: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಗೆ ನ.13ರವರೆಗೆ ಮಧ್ಯಂತರ ವೈದ್ಯಕೀಯ ಜಾಮೀನನ್ನು ವಿಸ್ತರಿಸಿ ಹೈಕೋರ್ಟ್‌ ಆದೇಶಿಸಿದೆ.

ಅಲ್ಲದೇ, ಶಾಸಕ ಸೈಲ್‌ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ವೃತ್ತಿಪರ ವೈದ್ಯರ ಹೆಸರನ್ನು ಇಡಿ ಸೂಚಿಸಬೇಕು ಎಂದು ನಿರ್ದೇಶಿಸಿದೆ.

ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಈಚೆಗೆ ಹೊರಡಿಸಿರುವ ಜಾಮೀನುರಹಿತ ಬಂಧನ ವಾರಂಟ್‌ ಮತ್ತು ಇಡಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸತೀಶ್‌ ಸೈಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಸ್‌ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.ಸತೀಶ್‌ ಸೈಲ್‌ಗೆ ಮಂಜೂರು ಮಾಡಲಾಗಿರುವ ವೈದ್ಯಕೀಯ ಮಧ್ಯಂತರ ಜಾಮೀನನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ.

ಈ ಮಧ್ಯೆ, ಸೈಲ್‌ ಅವರ ಆರೋಗ್ಯ ಪರಿಸ್ಥತಿಗೆ ಸಂಬಂಧಿಸಿದ ದಾಖಲೆಯನ್ನು ಪರಿಶೀಲಿಸಿ ಅದನ್ನು ಖಾತರಿಪಡಿಸಲು ಯಾವ ವೈದ್ಯರನ್ನು ನೇಮಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಲಹೆ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಸತೀಶ್‌ ಸೈಲ್‌ ಅವರು ಅನಾರೋಗ್ಯಪೀಡಿತರಾಗಿದ್ದರೆ ವೈದ್ಯಕೀಯ ದಾಖಲೆಯನ್ನು ಖಾತರಿಪಡಿಸಬೇಕು. ಈ ವಿಚಾರದ ಕುರಿತು ಯೋಚಿಸಿ, ತಿಳಿಸಿ ಎಂದು ಎಎಸ್‌ಜಿ ಕಾಮತ್‌ಗೆ ಸೂಚಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 13ಕ್ಕೆ ಮುಂದೂಡಿದೆ.‌

error: Content is protected !!