ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಕಾರು ಸ್ಫೋಟ ಬೆನ್ನಲ್ಲೇ ರಾಜ್ಯದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ಕೊಪ್ಪಳದಲ್ಲಿ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಜಾರ್ಖಂಡ್ ಮೂಲದ ಎಂಟು ಕಾರ್ಮಿಕರ ಗುಂಪಿನಲ್ಲಿ ಗಾಂಜಾ ಪತ್ತೆಯಾಗಿದೆ.
ಕೊಪ್ಪಳ ಬಸ್ ನಿಲ್ದಾಣದಲ್ಲಿ ಪೊಲೀಸ್ ಶ್ವಾನ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಈ ವೇಳೆ ಯಲಬುರ್ಗಾದಲ್ಲಿ ಕಟ್ಟಡವೊಂದರ ಕೆಲಸಕ್ಕೆ ಬಂದಿದ್ದ ಜಾರ್ಖಂಡ್ ಮೂಲದ ಕಾರ್ಮಿಕರ ಬಳಿ ಗಾಂಜಾ ಪತ್ತೆಯಾಗಿದೆ.
ಶ್ವಾನ ಬಿಂದು ತಪಾಸಣೆ ವೇಳೆ ಈ ಬ್ಯಾಗ್ ಬಳಿ ನಿಂತುಬಿಟ್ಟಿತ್ತು. ಆಗ ತಪಾಸಣೆ ಮಾಡಿದಾಗ ಬ್ಯಾಗ್‌ನಲ್ಲಿ ಎರಡು ಪ್ಯಾಕೆಟ್ ಗಾಂಜಾ ಪತ್ತೆಯಾಗಿದೆ. ಎಂಟು ಕಾರ್ಮಿಕರ ಪೈಕಿ ಆರು ಜನರ ಬ್ಯಾಗ್‌ನಲ್ಲಿ ಗಾಂಜಾ ಸಿಕ್ಕಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಸದ್ಯ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕಾರ್ಮಿಕರು ಅದು ಗಾಂಜಾ ಅಲ್ಲ, ತಂಬಾಕು ಎಂದು ತಿಳಿಸಿದ್ದಾರೆ. ಗಾಂಜಾ ಮಾದರಿಯ ತಂಬಾಕು ಎನ್ನಲಾಗುತ್ತಿದೆ. ಸದ್ಯ ಪೊಲೀಸರು ಮಾದಕ ವಸ್ತುಗಳನ್ನು ಜಪ್ತಿ ಮಾಡಿ, ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ.

