ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿದೆ. ಪ್ರಮುಖ ಎಜೆನ್ಸಿಗಳ ಸಮೀಕ್ಷೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಬಿಹಾರ ಜನತೆ ಮತ್ತೆ ಬಿಜೆಪಿ-ಜೆಡಿಯು ನೇತೃತ್ವದ ಸರ್ಕಾರ ಆಯ್ಕೆ ಮಾಡಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ. ಇತ್ತ ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ ಚುನಾವಣೆ ಎದುರಿಸಿದ ಮಹಾಘಟಬಂದನ್ ಹಾಗೂ ಪ್ರಶಾಂಕ್ ಕಿಶೋರ್ ಜನ ಸೂರಾಜ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಸಮೀಕ್ಷಾ ಫಲಿತಾಂಶ ಹೇಳುತ್ತಿದೆ. ಅಲ್ಲದೇ, ಕಳೆದ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಸ್ಥಾನಗಳಲ್ಲಿ ಮತ್ತಷ್ಟು ಕುಸಿತ ಕಾಣಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ.
ಎಕ್ಸಿಟ್ ಪೋಲ್‌ಗಳ ಸಮೀಕ್ಷೆಯು ವಿರೋಧ ಪಕ್ಷದ ಮೈತ್ರಿಕೂಟ ಕಾರ್ಯಕ್ಷಮತೆಯ ಬಗ್ಗೆ ಕರಾಳ ಚಿತ್ರಣವನ್ನು ನೀಡಿದೆ. 2020 ರಲ್ಲಿ ಮಹಾಘಟಬಂಧನ್ 110 ಗೆದ್ದಿತ್ತು. ಆದರೆ, ಈಗಿನ ಚುನಾವಣೋತ್ತರ ಸಮೀಕ್ಷೆಗಳಲ್ಲಿ ತೀರಾ ಕಡಿಮೆ ಸ್ಥಾನಗಳು ಸಿಕ್ಕಿವೆ. ಕಳೆದ ಬಾರಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಲಾಲು ಯಾದವ್ ಅವರ ಆರ್‌ಜೆಡಿ ಕುಸಿತ ಕಂಡಿದೆ. ಅದರ ಸ್ಥಾನವನ್ನು ಬಿಜೆಪಿ ಆಕ್ರಮಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ಭವಿಷ್ಯ ಹೇಳಿವೆ.
ದೈನಿಕ್ ಭಾಸ್ಕರ್, ಮ್ಯಾಟ್ರಿಜ್, ಪೀಪಲ್ಸ್ ಇನ್‌ಸೈಟ್, ಚಾಣಕ್ಯ ಸ್ಟ್ರಾಟಜೀಸ್ ಮತ್ತು ಪೀಪಲ್ಸ್ ಪಲ್ಸ್ ಸೇರಿದಂತೆ ಎಂಟು ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಗೆಲುವಿನ ಭವಿಷ್ಯ ನುಡಿದಿವೆ. ಎನ್‌ಡಿಎ 130 ರಿಂದ 167 ಸ್ಥಾನಗಳನ್ನು ಗಳಿಸಲಿದೆ. ಮಹಾಘಟಬಂಧನ್ 73 ರಿಂದ 108 ಸ್ಥಾನಗಳನ್ನು ಗಳಿಸಬಹುದು ಎಂದು ತಿಳಿಸಿವೆ.
ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು ಈ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಆರ್‌ಜೆಡಿ ಮತ್ತು ಕಾಂಗ್ರೆಸ್ ಎರಡೂ ಕಳಪೆ ಪ್ರದರ್ಶನ ನೀಡಿವೆ ಎಂದು ನಿರ್ಗಮನ ಸಮೀಕ್ಷೆಗಳು ಹೇಳಿವೆ. ಆರ್‌ಜೆಡಿ 57 ರಿಂದ 69 ಸ್ಥಾನಗಳನ್ನು ಗಳಿಸಲಿದೆ. ಕಳೆದ ಚುನಾವಣೆಯಲ್ಲಿ 75 ಸೀಟ್‌ಗಳನ್ನು ಗೆದ್ದಿತ್ತು. ಈಗ ಅದು ಮತ್ತಷ್ಟು ಕುಸಿದಿದೆ. ಕಳೆದ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 14 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ.

