ಹೊಸದಿಗಂತ ಡಿಜಿಟಲ್ ಡೆಸ್ಕ್:
ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಿಂದ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ‘ವೈಟ್-ಕಾಲರ್’ ಭಯೋತ್ಪಾದಕ ಮಾಡ್ಯುಲ್ ಗೆ ತನಿಖೆಗೆ ಸಂಬಂಧಿಸಿದಂತೆ ಹರಿಯಾಣದ ಮೇವಾತ್‌ನ ಮೌಲ್ವಿಯೊಬ್ಬರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಮೌಲ್ವಿ ಇಶ್ತಿಯಾಕ್ ಎಂದು ಗುರುತಿಸಲಾಗಿದೆ. ಅವರು ವಿಶ್ವವಿದ್ಯಾಲಯ ಸಂಕೀರ್ಣದೊಳಗಿನ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ, ಪೊಲೀಸರು 2,500 ಕಿಲೋಗ್ರಾಂಗಳಿಗೂ ಹೆಚ್ಚು ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇವು ಸಾಮಾನ್ಯವಾಗಿ ಸ್ಫೋಟಕಗಳಲ್ಲಿ ಬಳಸುವ ವಸ್ತುಗಳಾಗಿವೆ. ಇಶ್ತಿಯಾಕ್‌ನನ್ನು ವಿಚಾರಣೆಗಾಗಿ ಶ್ರೀನಗರಕ್ಕೆ ಕರೆತರಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದ ಒಂಬತ್ತನೇ ವ್ಯಕ್ತಿ ಇವರಾಗಿದ್ದಾರೆ.
ನಿಷೇಧಿತ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಯುಎಚ್) ಗಳೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಜಾಲವನ್ನು ನಿರ್ಮೂಲನೆ ಮಾಡಲು ಹರಿಯಾಣ ಮತ್ತು ಉತ್ತರ ಪ್ರದೇಶದ ಕಾನೂನು ಜಾರಿ ಸಂಸ್ಥೆಗಳ ಸಮನ್ವಯದೊಂದಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನವೆಂಬರ್ 10 ರಂದು ಅಂತರರಾಜ್ಯ ದಾಳಿಗಳನ್ನು ನಡೆಸಿದ ನಂತರ ಇವರನ್ನು ಬಂಧಿಸಲಾಗಿದೆ.

