Wednesday, November 12, 2025

ಸ್ವದೇಶಿ ಮೇಳದಲ್ಲಿ ಗೋ ಪೂಜೆ ನೆರವೇರಿಸಿದ ಶ್ರೀಕೃಷ್ಣಯಾದವಾನಂದ ಸ್ವಾಮೀಜಿ


ಹೊಸದಿಗಂತ ವರದಿ ಚಿತ್ರದುರ್ಗ:

ಕೋಟೆನಗರಿ ಚಿತ್ರದುರ್ಗದಲ್ಲಿ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ಆಯೋಜಿಸಿರುವ ಸ್ವದೇಶಿ ಮೇಳ ಬುಧವಾರದಿಂದ ಆರಂಭವಾಗಿದ್ದು, ಬೆಳ್ಳಿಗೆ ಯಾದವ ಮಠದ ಶ್ರೀ ಕೃಷ್ಣಯಾದವನಂದ ಶ್ರೀಗಳು ಗೋವಿನ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಗುಡಿ ಕೈಗಾರಿಕೆಗಳು ಹೆಚ್ಚಾಗಿ ಬೆಳಕಿಗೆ ಬರಬೇಕು. ಇವುಗಳು ತಯಾರು ಮಾಡಿದ ಉತ್ಪನ್ನಗಳನ್ನು ನಮ್ಮ ಜನ ಖರೀದಿ ಮಾಡಬೇಕು. ನಮ್ಮಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಸರಿಯಾದ ಮಾರುಕಟ್ಟೆ ಸಿಗಬೇಕು. ಇದರ ಜೊತೆಗೆ ಬೆಲೆಯೂ ಸಿಕ್ಕಾಗ ಮಾತ್ರ ಉತ್ಪಾದಕ ಚೆನ್ನಾಗಿರಲು ಸಾಧ್ಯ. ಜಾಗರಣ ಮಂಚ್ ಉತ್ತಮ ಕಾರ್ಯಕ್ರಮ ಮಾಡುತ್ತಿದೆ. ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಗಳಿಗೆ ಸರಿಯಾದ ಮಾರುಕಟ್ಟೆ ಇರುವುದಿಲ್ಲ, ಇಂತಹ ಕಾರ್ಯಕ್ರಮಗಳಲ್ಲಿ ಅಂತಹ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂದರು.

ಇಲ್ಲಿ ನಡೆಯುವ ಸ್ವದೇಶಿ ಮೇಳ ನಮ್ಮ ಜನರನ್ನು ಆಕರ್ಷಿಸುವ ಕಾರ್ಯಕ್ರಮ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಜನತೆ ಸಕ್ರಿಯವಾಗಿ ಭಾಗವಹಿಸಿ ಸ್ವದೇಶಿ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು. ಇಲ್ಲಿ ನಿಮ್ಮ ಮನೆಗಳಿಗೆ ಬೇಕಾದ ಅಗತ್ಯ ವಸ್ತುಗಳು ಉತ್ಪಾದಕರಿಂದ ನೇರವಾಗಿ ಗ್ರಾಹಕರನ್ನು ತಲುಪಲಿದೆ. ಇಲ್ಲಿ ಯಾವ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಸುಮಾರು ೫ ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವಂತೆ ಕರೆ ನೀಡಿದರು.
ಸ್ವದೇಶಿ ಮೇಳದ ಸಂಯೋಜಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ದೇಸಿ ಸಂಸ್ಕೃತಿ, ದೇಸಿ ಆಟ, ಆಹಾರ, ಕ್ರೀಡೆ, ಸಾವಯವ ಕೃಷಿ, ಆಯುರ್ವೇದ ಚಿಕಿತ್ಸೆ, ದೇಸಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಗಳ ನ್ನೊಳಗೊಂಡ ಸ್ವಾವಲಂಬನೆಯ ಪರಿಕಲ್ಪನೆ ಸ್ವದೇಶಿ ಮೇಳವಾಗಿದೆ. ಮೇಳದಲ್ಲಿ ದೇಶದ ವಿವಿಧೆಡೆಯಿಂದ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಸ್ಥಳೀಯರಿಗೆ ತರಬೇತಿ, ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ ಎಂದರು.

error: Content is protected !!