ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆರ್‌ಸಿಬಿ ಗೆಲುವಿನ ಸಂಭ್ರಮ ಸಮಯ ಸಂಭವಿಸಿದ ಕಾಲ್ತುಳಿತ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ನ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರ ಜಾಮಿನಿಗೆ ವಿಧಿಸಲಾಗಿದ್ದ ಪ್ರಮುಖ ಷರತ್ತನ್ನು ಹೈಕೋರ್ಟ್ ಬುಧವಾರ ಸಡಿಲಿಸಿದೆ.
ಕಾಲ್ತುಳಿತ ಪ್ರಕರಣದಲ್ಲಿ ಜೂನ್ 6 ರಂದು ಸೋಸಲೆ ಅವರನ್ನು ಬಂಧಿಸಲಾಗಿತ್ತು. ಅದಾದ ಆರು ದಿನಗಳ ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ವೇಳೆ ಸೋಸಲೆ ಅವರಿಗೆ ಬೆಂಗಳೂರು ಬಿಟ್ಟು ಹೋಗದಂತೆ ನಿರ್ಬಂಧ ಹೇರಲಾಗಿತ್ತು.
ಇದೀಗ ಈ ಆದೇಶವನ್ನು ಮಾರ್ಪಡಿಸುವಂತೆ ಕೋರಿದ್ದ ಸೋಸಲೆ, ತಮ್ಮ ವೃತ್ತಿಪರ ಕರ್ತವ್ಯಗಳ ಕಾರಣದಿಂದಾಗಿ ದೇಶದಾದ್ಯಂತ ಪ್ರಯಾಣಿಸುವುದು ಕಡ್ಡಾಯವಾಗಿದೆ ಎಂದು ವಾದಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಸೋಸಲೆ ಅವರ ಕೆಲಸ ಭಾರತದಾದ್ಯಂತ ಆಗಾಗ್ಗೆ ಪ್ರಯಾಣಿಸುವುದನ್ನು ಅಗತ್ಯ ಮತ್ತು ಅವರು ಪ್ರತಿ ಬಾರಿ ಪ್ರಯಾಣಿಸಿದಾಗ ಅಥವಾ ಸ್ಥಳ ಬದಲಾಯಿಸಿದಾಗ ತನಿಖಾ ಅಧಿಕಾರಿಗೆ ತಿಳಿಸಲು ಒಪ್ಪಿಕೊಂಡಿದ್ದಾರೆ ಎಂದು ಗಮನಿಸಿದೆ. ಈ ಭರವಸೆಯನ್ನು ಒಪ್ಪಿಕೊಂಡ ಪೀಠವು, ಸೋಸಲೆ ಅವರಿಗೆ ಪರಿಹಾರ ನೀಡುವುದು ಸಮಂಜಸವಾಗಿದೆ. ನಗರದಿಂದ ಹೊರಡುವ ಮೊದಲು ಮತ್ತು ಅವರು ಹಿಂದಿರುಗಿದ ನಂತರ ತನಿಖಾ ಅಧಿಕಾರಿಗೆ ತಿಳಿಸಿದರೆ ಷರತ್ತು ಸಡಿಲಿಸಲಾಗುತ್ತದೆ ಎಂದ ಆದೇಶದಲ್ಲಿ ತಿಳಿಸಿದೆ.
ಆದಾಗ್ಯೂ, ಸೋಸಲೆ ಅವರಿಗೆ ಜಾಮೀನು ನೀಡಿದಾಗ ಆರಂಭಿಕವಾಗಿ ವಿಧಿಸಲಾಗಿದ್ದ ಷರತ್ತುಗಳ ಭಾಗವಾಗಿದ ಪಾಸ್‌ಪೋರ್ಟ್ ಅನ್ನು ಒಪ್ಪಿಸುವ ಷರತ್ತನ್ನು ಬದಲಿಸಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದರರ್ಥ ಅವರು ಇನ್ನೂ ವಿದೇಶ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದೆ.

