ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ನಯನತಾರ ಹಾಗೂ ಅವರ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗಳುಬುಧವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರುಶನ ಪಡೆದು ಸರ್ಪಸಂಸ್ಕಾರ ಪೂಜೆಯಲ್ಲಿ ಪಾಲ್ಗೊಂಡರು.
ಆರಂಭದಲ್ಲಿ ಶ್ರೀ ದೇವರ ದರುಶನ ಪಡೆದ ಬಳಿಕ ಆದಿ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ಸೇವೆಗೆ ಸಂಕಲ್ಪ ನೆರವೇರಿಸಿ ಸರ್ಪಸಂಸ್ಕಾರ ಆರಂಭಿಸಿದರು. ಗುರುವಾರ ಗೋಪೂಜೆ, ನಾಗಪ್ರತಿಷ್ಠೆ ನೆರವೇರಿಸಿ ಸೇವೆ ಸಮಾಪ್ತಿಗೊಳಿಸಲಿದ್ದಾರೆ.
ನಯನತಾರಾ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪ್ರಖ್ಯಾತ ಬಹುಭಾಷಾ ನಟಿಯಾಗಿದ್ದಾರೆ. ಅವರು ಲೇಡಿ ಸೂಪರ್ ಸ್ಟಾರ್ ಎಂದೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್.ಎಸ್ ಇಂಜಾಡಿ ಅವರು ನಯನತಾರ ದಂಪತಿಗಳನ್ನು ಸ್ವಾಗತಿಸಿದರು. ಈ ಸಂದರ್ಭ ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್. ಎಸ್ ಉಪಸ್ಥಿತರಿದ್ದರು.

