Friday, November 14, 2025

26/11 ಮುಂಬೈ ಮಾದರಿ ದೆಹಲಿಯಲ್ಲೂ ಸರಣಿ ಸ್ಪೋಟಕ್ಕೆ ನಡೆದಿತ್ತೇ ಸಂಚು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಕಾರು ಸ್ಪೋಟದ ತನಿಖೆಯನ್ನು ಎನ್‌ಐಎ ಚುರುಕುಗೊಳಿಸಿದ್ದು, ಈ ವಿಧ್ವಂಸಕ ಕೃತ್ಯದ ಹಿಂದಿನ ರಹಸ್ಯಗಳು ಒಂದೊಂದಾಗಿ ಹೊರಬೀಳತೊಡಗಿವೆ.

ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಬಾಂಬ್‌ ಸ್ಪೋಟ ನಡೆಸಿದ್ದ ಭಯೋತ್ಪಾದಕರು, ಅಸಲಿಗೆ 26/11 ಮುಂಬೈ ದಾಳಿಯ ಮಾದರಿಯಲ್ಲಿ ದೆಹಲಿ ನಗರದಾದ್ಯಂತ ಬಾಂಬ್‌ ಸ್ಪೋಟಿಸುವ ಯೋಜನೆಯನ್ನು ಹೊಂದಿದ್ದರು ಎಂಬ ಸಂಗತಿ ಬಯಲಾಗಿದೆ.

ನವೆಂಬರ್ 26, 2008ರಂದು ನಡೆದ ಮುಂಬೈ ದಾಳಿಯ ಸಮಯದಲ್ಲಿ, ತಾಜ್ ಹೋಟೆಲ್, ಒಬೆರಾಯ್ ಹೋಟೆಲ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಲಿಯೋಪೋಲ್ಡ್ ಆಸ್ಪತ್ರೆ ಸೇರಿದಂತೆ, ಒಟ್ಟು 12 ಸ್ಥಳಗಳಲ್ಲಿ ಏಕಕಾಲದಲ್ಲಿ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳು ನಡೆದಿದ್ದವು. ಅದೇ ರೀತಿ 26/11 ಮುಂಬೈ ದಾಳಿಯ ಮಾದರಿಯಲ್ಲಿ ದೆಹಲಿಯಲ್ಲಿ ಸರಣಿ ದಾಳಿ ನಡೆಸಲು ಉದ್ದೇಶಿಸಿದ್ದ ಉಗ್ರರು, ಕೆಂಪು ಕೋಟೆ, ಇಂಡಿಯಾ ಗೇಟ್, ಕಾನ್ಸ್ಟಿಟ್ಯೂಷನ್ ಕ್ಲಬ್ ಮತ್ತು ಗೌರಿ ಶಂಕರ್ ದೇವಾಲಯ ಸೇರಿದಂತೆ, ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಸರಣಿ ದಾಳಿಗಳಿಗಾಗಿ ಸುಮಾರು 200 IEDಗಳನ್ನು ಸಂಗ್ರಹಿಸುವ ಪ್ರಯತ್ನ ಕೂಡ ನಡೆದುತ್ತು ಎಂಬುದು ನಿಜಕ್ಕೂ ಆಘಾತಕಾರಿ ಅಂಶವಾಗಿದೆ.

ಕಳೆದ ಜನವರಿಯಿಂದಲೇ ದೆಹಲಿಯಲ್ಲಿ ಬಾಂಬ್‌ ಸ್ಪೋಟಿಸುವ ಪಿತೂರಿ ನಡೆಯುತ್ತಿತ್ತು. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್‌ಗೆ ಸಂಬಂಧಿಸಿದ ಭಯೋತ್ಪಾದಕ ಘಟಕವು, ಹಲವುತಿಂಗಳುಗಳಿಂದ ಈ ದಾಳಿಯನ್ನು ಯೋಜಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಮಾತ್ರವಲ್ಲದೆ ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲೂ ಸಹ ಹಲವು ಪ್ರದೇಶಗಳನ್ನು ಗುರಿಯಾಗಿಸಲು, ಈ ಗುಂಪು 200 ಶಕ್ತಿಶಾಲಿ ಸುಧಾರಿತ ಸ್ಫೋಟಕ ಸಾಧನಗಳು (IED) ಅಥವಾ ಬಾಂಬ್‌ಗಳನ್ನು ಸಿದ್ಧಪಡಿಸುತ್ತಿತ್ತು.

ಬಂಧನದಲ್ಲಿರುವ ಶಂಕಿತರಲ್ಲಿ ಮೂವರು ವೈದ್ಯರಾಗಿದ್ದಾರೆ. ಡಾ. ಶಾಹೀನ್ ಸಯೀದ್, ಮುಜಮ್ಮಿಲ್ ಶಕೀಲ್ ಗನೈ ಮತ್ತು ಅದೀಲ್ ಅಹ್ಮದ್‌ ರಾಥರ್ ಮೂವರು ಪರಸ್ಪರ ನಿರಂತರ ಸಂಪರ್ಕ ಹೊಂದಿದ್ದರು. ನವೆಂಬರ್ 10 ರಂದು ನಡೆದ ಸ್ಫೋಟದಲ್ಲಿ ಸಾವನ್ನಪ್ಪಿದ ಆತ್ಮಹತ್ಯಾ ಬಾಂಬರ್ ಡಾ. ಉಮರ್ ನಬಿ ಕೂಡ ಇವರ ಸಂಪರ್ಕದಲ್ಲಿದ್ದ ಎಂಬುದು ಸ್ಪಷ್ಟವಾಗಿದೆ.

ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಡಾ. ಸಯೀದ್ ಅವರೊಂದಿಗೆ ಕೆಲಸ ಮಾಡಿದ ಇತರ ಮೂವರು ವೈದ್ಯರನ್ನು ಸಹ ಬಂಧಿಸಲಾಗಿದೆ. ಆದರೆ ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಬಂಧಿತರ ಪೈಕಿ ಮಹಿಳಾ ವೈದ್ಯೆಯಾಗಿರುವ ಲಖನೌ ಮೂಲದ ಡಾ. ಶಾಹೀನ್‌ ಶಾಹೀದ್‌, ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಮಹಿಳಾ ವಿಭಾಗವಾದ ಜಮಾತ್-ಉಲ್-ಮೊಮಿನಾತ್‌ ಘಟಕವನ್ನು ಭಾರತದಲ್ಲಿ ಸ್ಥಾಪಿಸುವ ಜವಾಬ್ದಾರಿ ಹೊತ್ತಿದ್ದಳು ಎಂಬುದು ತನಿಖೆಯಿಂದ ದೃಢಪಟ್ಟಿದೆ.

error: Content is protected !!