ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. ದರ ನಿಗದಿ ವಿಚಾರವಾಗಿ ರೈತರಲ್ಲಿ ಒಮ್ಮತ ಮೂಡದಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬೆಳಗಾವಿಯ ರೈತರು ಸರ್ಕಾರ ನಿಗದಿಪಡಿಸಿದ ಕ್ವಿಂಟಲ್‌ಗೆ ₹3,300ಕ್ಕೆ ಒಪ್ಪಿಗೆ ಸೂಚಿಸಿದ್ದರೆ, ಬೀದರ್ ಮತ್ತು ಬಾಗಲಕೋಟೆಯ ರೈತರು ಮಾತ್ರ ₹3,500 ದರಕ್ಕೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.
ದರ ಸಮರದ ಮಧ್ಯೆ ಸಿಎಂಗೆ ಪ್ರಲ್ಹಾದ್ ಜೋಶಿಯವರ ಪತ್ರಾಸ್ತ್ರ!
ಈ ಗೊಂದಲದ ಪರಿಸ್ಥಿತಿಯ ನಡುವೆಯೇ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಬ್ಬು ಬೆಳೆಗಾರರಿಗೆ ದರ ಪಾವತಿಸುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.
ಪತ್ರದಲ್ಲಿ, ಜೋಶಿ ಅವರು ಕಬ್ಬು ಬೆಳೆಗಾರರ ಕಲ್ಯಾಣದ ಕುರಿತು ಸಿಎಂ ತೋರುತ್ತಿರುವ ಇತ್ತೀಚಿನ ಕಾಳಜಿಯನ್ನು ಪ್ರಶಂಸಿಸುತ್ತಾ, “ಆದರೆ ರೈತರ ಹಿತಾಸಕ್ತಿ ರಕ್ಷಣೆ ಮತ್ತು ಸಕ್ಕರೆ ಕ್ಷೇತ್ರದ ಸುಸ್ಥಿರತೆಗಾಗಿ ಕೇಂದ್ರ ಸರ್ಕಾರ ಕೈಗೊಂಡ ಪರಿವರ್ತನಾತ್ಮಕ ಸುಧಾರಣೆಗಳು ಮತ್ತು ಮೂಲಭೂತ ವಾಸ್ತವಗಳನ್ನು ಕಡೆಗಣಿಸುವಂತೆ ತೋರುತ್ತಿರುವುದು ದುರದೃಷ್ಟಕರ” ಎಂದು ಅಭಿಪ್ರಾಯಪಟ್ಟಿದ್ದಾರೆ.
2025-26ರ ಸಾಲಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP): ಕೇಂದ್ರವು 10.25% ಇಳುವರಿ ದರದಲ್ಲಿ ಕ್ವಿಂಟಲ್‌ಗೆ ₹355 ದರವನ್ನು ನಿಗದಿಪಡಿಸಿದೆ. ಉತ್ಪಾದನಾ ವೆಚ್ಚಕ್ಕಿಂತ 105% ಹೆಚ್ಚು ಲಾಭ: ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸುಗಳ ಆಧಾರದ ಮೇಲೆ ನಿಗದಿಪಡಿಸಿದ ಈ ದರವು, ಉತ್ಪಾದನಾ ವೆಚ್ಚದ ಮೇಲೆ ಶೇ. 105ಕ್ಕಿಂತ ಹೆಚ್ಚಿನ ಅಂತರವನ್ನು ಒದಗಿಸುತ್ತದೆ. ಇದು ರೈತರ ರಕ್ಷಣೆಯಲ್ಲಿ ಅಭೂತಪೂರ್ವ ಮಟ್ಟ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸಲಹಾ ಬೆಲೆ ಪ್ರಸ್ತಾಪ: ಎಫ್‌ಆರ್‌ಪಿ ಕೇವಲ ಕನಿಷ್ಠ ಮಾನದಂಡವಾಗಿದ್ದು, ರಾಜ್ಯಗಳು ಹೆಚ್ಚಿನ ರಾಜ್ಯ ಸಲಹಾ ಬೆಲೆ ಘೋಷಿಸಲು ಮುಕ್ತವಾಗಿವೆ. ಆದರೆ ಕರ್ನಾಟಕದಲ್ಲಿ ಈ SAP ಅನ್ನು ಘೋಷಿಸಿಲ್ಲ ಎಂಬುದನ್ನು ಜೋಶಿ ಗಮನಸೆಳೆದಿದ್ದಾರೆ.
ಕೇಂದ್ರದ ನೀತಿಗಳು ರೈತರ ಹಿತ ಮತ್ತು ಮಾರುಕಟ್ಟೆ ಸ್ಥಿರತೆಯನ್ನು ಹೇಗೆ ಕಾಯ್ದುಕೊಂಡಿವೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಪ್ರಲ್ಹಾದ್ ಜೋಶಿಯವರು ಮನವರಿಕೆ ಮಾಡಿದ್ದಾರೆ.

